ಲಂಚ ಇಲ್ಲ ಅಂದ್ರೆ ಸರ್ಕಾರದಲ್ಲಿ ಒಂದಿಂಚೂ ಕೆಲಸ ಆಗಲ್ಲ : ನಿಡುಮಾಮಿಡಿ ಸ್ವಾಮೀಜಿ
ಚಿಕ್ಕಬಳ್ಳಾಪುರ : ಲಂಚ ಕೊಡಲಿಲ್ಲ ಅಂದರೆ ಸರ್ಕಾರದಲ್ಲಿ ಒಂದಿಂಚೂ ಕೆಲಸ ಕೂಡ ಆಗಲ್ಲ ಎಂದು ನಿಡುಮಾಮಿಡಿ ಮಠದ ಪೀಠಾಧಿಪತಿ ವೀರಭದ್ರ ಚನ್ನಮಲ್ಲ ಮಹಾ ಸ್ವಾಮೀಜಿ ಬೇಸರ ಹೊರಹಾಕಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ.
ಲಂಚ ಕೊಡಲಿಲ್ಲ ಅಂದರೆ ಯಾವುದೇ ಸರ್ಕಾರಿ ಕೆಲಸ ಕಾರ್ಯಗಳು ಆಗುತ್ತಿಲ್ಲ. ಲಂಚ ಕೊಡುವುದೂ ತಪ್ಪು ಲಂಚ ತೆಗೆದುಕೊಳ್ಳುವುದೂ ತಪ್ಪು.
ನಮ್ಮ ಕಾರ್ಯಕರ್ತರೇ ವಿಧಿ ಇಲ್ಲದೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.
ಇದೇ ವೇಳೆ ಜಿಲ್ಲಾಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸ್ವಾಮೀಜಿ, ಹಲವು ವರ್ಷಗಳಿಂದ ಮಠಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿರಂತರವಾಗಿ ಅನ್ಯಾಯ ಮಾಡುತ್ತಿದೆ.
ಮುಖ್ಯಮಂತ್ರಿಗಳು ಮಠಕ್ಕೆ ಅನುದಾನ ನೀಡಿದ್ರೂ ಜಿಲ್ಲಾಡಳಿತ ಅದಕ್ಕೆ ಅಡ್ಡಗಾಲು ಹಾಕುತ್ತಿದೆ. ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಅನ್ನೋ ಹಾಗೆ ಜಿಲ್ಲಾಡಳಿತ ವರ್ತಿಸುತ್ತಿದೆ.
ಈ ಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವ, ಕಂದಾಯ ಸಚಿವರ ಗಮನಕ್ಕೆ ತರುತ್ತೇನೆ. ನಂತರ ಹೋರಾಟ ನಡೆಸುತ್ತೇನೆ. ಪ್ರತಿಯೊಂದು ವಿಚಾರದಲ್ಲೂ ಜಿಲ್ಲಾಡಳಿತ ಮಠಕ್ಕೆ ತೊಂದರೆ ಕೊಡುತ್ತಿದೆ ಎಂದು ಆರೋಪ ಮಾಡಿದರು.
