ಬೆಂಗಳೂರು: ಉಪಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮರಾಠಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿರುವ ಬೆನ್ನಲ್ಲೇ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ನಿಗಮ ಸ್ಥಾಪನೆ ಆದೇಶ ರಾಜ್ಯಪತ್ರದಲ್ಲಿ ಪ್ರಕಟಗೊಂಡಿದ್ದು, 500 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜಾತಿಗಳಿಗೆ ಸಂಬಂಧಿ ಯಾವುದೇ ಅಭಿವೃದ್ಧಿ ನಿಗಮಕ್ಕೆ ಇಷ್ಟೊಂದು ಅನುದಾನ ನೀಡಿದ ಉದಾಹರಣೆಗಳಿಲ್ಲ ಎನ್ನಲಾಗಿದೆ.

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದೇ ಆದರೆ 2000 ಕೋಟಿ ರೂ. ಅನುದಾನ ಕೊಡಬೇಕು, ಇಲ್ಲವಾದರೆ ನಿಗಮ ಸ್ಥಾಪನೆ ಉದ್ದೇಶವೇ ಈಡೇರುವುದಿಲ್ಲ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದರು.
ಕರ್ನಾಟಕದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ವೀರಶೈವ-ಲಿಂಗಾಯತ ಸಮಾಜದ ಓಲೈಕೆಯ ತಂತ್ರವಾಗಿಯೇ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದವರೇ ಆಗಿರುವ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ ನೂರಾರು ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆಯಾ ಎಂಬ ಚರ್ಚೆ ರಾಜ್ಯ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ವಿಶೇಷವೆಂದರೆ, ಬೆಳಗಾವಿ ಲೋಕಸಭೆ ಉಪಚುನಾವಣೆ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆ ಆಡಳಿತಾರೂಡ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ಇನ್ನೂ ದಿನಾಂಕವನ್ನೇ ಪ್ರಕಟಿಸಿಲ್ಲ. ಆದರೆ, ಶೀಘ್ರವೇ ದಿನಾಂಕ ಪ್ರಕಟವಾಗುವ ನಿರೀಕ್ಷೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಖಾಡಕ್ಕೆ ಇಳಿದು ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿವೆ. ಈ ಮೂರು ಕ್ಷೇತ್ರಗಳಲ್ಲಿ ವೀರಶೈವ-ಲಿಂಗಾಯತ ಮತದಾರರ ಸಂಖ್ಯೆ ಹೆಚ್ಚಿದೆ. ಲಿಂಗಾಯತರ ಮತಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಕಾರಣಕ್ಕಾಗಿಯೇ ಬಿಜೆಪಿ ಸರ್ಕಾರ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಮಾಡಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಮತ್ತೊಂದೆಡೆ, ಬೆಳಗಾವಿ ಜಿಲ್ಲೆಯಲ್ಲಿರುವ ಮರಾಠಿ ಮತದಾರರ ಓಲೈಕೆಗೆ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದ ರಾಜ್ಯ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡಪರ ಸಂಘಟನೆಗಳು ಬೀದಿಗೆ ಇಳಿದಿವೆ. ಪ್ರಾಧಿಕಾರ ರಚನೆ ವಾಪಸ್ ಪಡೆಯುವಂತೆ ಆಗ್ರಹಿಸಿ ಡಿಸೆಂಬರ್ 5ರಂದು ಕರ್ನಾಟಕ ಬಂದ್‍ಗೂ ಕರೆ ನೀಡಿವೆ.
ಮರಾಠಿ ನಿಗಮದ ವಿವಾದ ಬೆನ್ನಲ್ಲೇ ಸದ್ದಿಲ್ಲದೆ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಖಜಾನೆ ಖಾಲಿಯಾಗಿದ್ರೂ 500 ಕೋಟಿ ಅನುದಾನ..!
ಕೊರೊನಾ ಕಾರಣಕ್ಕೆ ಲಾಕ್‍ಡೌನ್ ಹೇರಿದ ಪರಿಣಾಮ ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಖಜಾನೆ ಖಾಲಿಯಾಗಿದ್ದರೂ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ, ಮರಾಠಿ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ. ಹಣವನ್ನು ಸರ್ಕಾರ ಹೇಗೆ ಹಂಚಿಕೆ ಮಾಡಿದೆ ಎಂಬ ಪ್ರಶ್ನೆ ಎದುರಾಗಿದೆ.
ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡಲು ಹಣ ಇಲ್ಲ ಎಂದು 8 ತಿಂಗಳಿಂದ ಕಾಯಿಸಿದ ಸರ್ಕಾರಕ್ಕೆ, ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ವಾಯುವ್ಯ, ಈಶಾನ್ಯ ಸಾರಿಗೆ ನೌಕರರಿಗೆ 3 ತಿಂಗಳಿಂದ ಸಂಬಳ ಆಗಿಲ್ಲ. ಹೀಗಿದ್ದರೂ ಜಾತಿಗಳ ಅಭಿವೃದ್ಧಿ ನಿಗಮಗಳಿಗೆ ನೂರಾರು ಕೋಟಿ ರೂ. ಅನುದಾನ ಎಲ್ಲಿಂದ ಬಂತು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
`ಒಕ್ಕಲಿಗರ ಅಭಿವೃದ್ಧಿ ನಿಗಮವನ್ನೂ ರಚನೆ ಮಾಡ್ತೇವೆ..’
ಲಿಂಗಾಯತರ ಬಳಿಕ ಅತಿಹೆಚ್ಚು ಮತದಾರರನ್ನು ಹೊಂದಿರುವ ಒಕ್ಕಲಿಗ ಜಾತಿಗೂ ಅಭಿವೃದ್ಧಿ ನಿಗಮ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಯಾವುದೇ ಒಂದು ಜಾತಿ, ಜನಾಂಗದ ಅಭಿವೃದ್ಧಿ ಕಾರಣಕ್ಕೆ ನಿಗಮಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಆಯಾ ಸಮುದಾಯದ ಜನರು ನಿಗಮ ಸ್ಥಾಪನೆಗೆ ಬೇಡಿಕೆ ಸಲ್ಲಿಸುತ್ತಾರೆ. ಹೀಗಾಗಿ ಜನರ ಭಾವನೆಗಳಿಗೆ ಸ್ಪಂದಿಸುವ ಸಲುವಗಿ ಅಭಿವೃದ್ಧಿ ನಿಗಮ ಮಾಡಲಾಗುತ್ತಿದೆ. ಸದ್ಯದಲ್ಲೇ ಒಕ್ಕಲಿಗ ಸಮುದಾಯಕ್ಕೂ ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗುತ್ತಿದೆ ಎಂದು ಡಿಸಿಎಂ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








