ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಸೋಲಿನ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಪ್ರದರ್ಶನದ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದು, ಈ ನಡುವೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸಹ ಭಾರತದ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐದು ಪಂದ್ಯಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ 3-2 ಅಂತರದಿಂದ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಭಾರತ ತಂಡದ ಪ್ರದರ್ಶನದ ಕುರಿತು ಟೀಕಿಸಿರುವ ಕನ್ನಡಿಗ ವೆಂಕಟೇಶ್ ಪ್ರಸಾದ್, ಸೀಮಿತ ಓವರ್‌ಗಳಲ್ಲಿ ಭಾರತ ಸಾಮಾನ್ಯ ತಂಡವಾಗಿದೆ ಎಂದಿದ್ದಾರೆ. ಆ ಮೂಲಕ ಹಾರ್ದಿಕ್ ಪಾಂಡ್ಯ ಸಾರಥ್ಯದ ಟೀಂ ಇಂಡಿಯಾ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ವೆಂಕಟೇಶ್ ಪ್ರಸಾದ್, “ಸದ್ಯದ ಮಟ್ಟಿಗೆ ಭಾರತ ಸೀಮಿತ ಓವರ್‌ಗಳಲ್ಲಿ ಸಾಮಾನ್ಯ ತಂಡವಾಗಿದೆ”. ಈ ಹಿಂದೆ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ವೆಸ್ಟ್ ಇಂಡೀಸ್ ವಿಫಲವಾಗಿತ್ತು. ಅಲ್ಲದೇ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಸಹ ನಾವು ಸೋತಿದ್ದೆವು. ಹೀಗಾಗಿ ಲಘುವಾದ ಹೇಳಿಕೆಗಳನ್ನು ನೀಡುವ ಬದಲು ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ” ಎಂದಿದ್ದಾರೆ.
“ಕೇವಲ 50 ಓವರ್‌ಗಳಲ್ಲಿ ಮಾತ್ರವಲ್ಲದೇ, ವೆಸ್ಟ್ ಇಂಡೀಸ್ ಕಳೆದ ಅಕ್ಟೋಬರ್-ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಇಂತಹ ಸಂದರ್ಭದಲ್ಲೂ ಭಾರತ ಕಳಪೆ ಪ್ರದರ್ಶನ ನೀಡಿದ್ದು ನೋವುಂಟುಮಾಡುತ್ತದೆ. ಅಲ್ಲದೇ ಆಟಗಾರರಲ್ಲಿ ಗೆಲುವಿನ ಹಸಿವು, ಫೈಯರ್ ಕಾಣೆಯಾಗಿದ್ದು, ನಾವು ಭ್ರಮೆಯಲ್ಲಿ ಬದುಕುತ್ತೇವೆ” ಎಂದು ಆಟಗಾರರು ಹಾಗೂ ತಂಡದ ಮ್ಯಾನೇಜ್ಮೆಂಟ್ ಬಗ್ಗೆ ಮಾಜಿ ಕ್ರಿಕೆಟರ್ ಬೇಸರ ಹೊರಹಾಕಿದ್ದಾರೆ.








