ಫ್ಯಾನ್ ಇಂಡಿಯಾ ಚಿತ್ರ ಆದಿಪುರುಷ್ʼ (Adipurush) ಸಿನಿಮಾದಲ್ಲಿ ಪ್ರಭಾಸ್ ಜೊತೆ ನಟಿಸಿದ್ದ ಹಿರಿಯ ನಟಿ ಇಹಲೋಕ ತ್ಯಜಿಸಿದ್ದಾರೆ.
ನಟಿ ಆಶಾ ಶರ್ಮಾ (Asha Sharma) (88) ಭಾನುವಾರ ನಿಧನರಾಗಿದ್ದಾರೆ. ಏಕ್ತಾ ಕಪೂರ್ ಅವರ ಹಿಟ್ ಶೋ ʻಕುಂಕುಮ್ ಭಾಗ್ಯʼ (Kumkum Bhagya) ಮೂಲಕ ಜನಪ್ರಿಯರಾಗಿದ್ದ ಹಿರಿಯ ನಟಿ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಆದರೆ, ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಆಶಾ ಶರ್ಮಾ ನಿಧನಕ್ಕೆ ಸಿನಿ ಮತ್ತು ಟಿವಿ ಆರ್ಟಿಸ್ಟ್ಸ್ ಅಸೋಸಿಯೇಷನ್ (CINTAA) ಎಕ್ಸ್ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದೆ. ಹಿರಿಯ ನಟಿ ಹೇಮಾ ಮಾಲಿನಿ, ಪ್ರೇಮ್ ಚೋಪ್ರಾ, ಅರುಣಾ ಇರಾನಿ ಮತ್ತು ನಿರುಪಾ ರಾಯ್ ಸೇರಿದಂತೆ ಬಾಲಿವುಡ್‌ನ ಹಿರಿಯ ನಟ-ನಟಿಯರು ಕಂಬನಿ ಮಿಡಿದಿದ್ದಾರೆ.
ʻಕುಂಕುಮ್ ಭಾಗ್ಯʼ ಡ್ರಾಮಾ ಶೋ ಮೂಲಕ ಜನಪ್ರಿಯವಾಗಿದ್ದ ನಟಿ ಹೆಚ್ಚಾಗಿ ತಾಯಿ ಮತ್ತು ಅಜ್ಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರು ಕೊನೆಯದಾಗಿ ಪ್ರಭಾಸ್ ಹಾಗೂ ಕೃತಿ ಸನೋನ್ ನಟನೆಯ ʻಆದಿಪುರುಷ್ʼ ಸಿನಿಮಾದಲ್ಲಿ ʻಶಬರಿʼ ಪಾತ್ರ ನಿರ್ವಹಿಸಿದ್ದರು. ಅವರ ಅದ್ಭುತ ನಟನೆಗೆ ಭಾರೀ ಹೆಸರು ಪಡೆದುಕೊಂಡಿದ್ದರು.








