ಕೊಪ್ಪಳ: ನಿನ್ನೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ಭಾರಿ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮಗು ಎತ್ತಿಕೊಂಡು ದಾಟುವಾಗ ವ್ಯಕ್ತಿಯೊಬ್ಬ ಆಯತಪ್ಪಿ ಬಿದ್ದು, ನಂತರ ಸಾವರಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರ ಜತೆಗೇ ಪತಿಯೊಬ್ಬ ಹಳ್ಳ ದಾಟಲು ಪತ್ನಿಯನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾನೆ.
ಕೊಪ್ಪಳದ ಅಳವಂಡಿ-ಕಂಪ್ಲಿ ಬಳಿ ಘಟನೆ ನಡೆದಿದ್ದು, ಮೊಬೈಲ್ನಲ್ಲಿ ಸೆರೆಯಾದ ವಿಡಿಯೋ ವೈರಲ್ ಅಗಿದೆ.
ಅಳವಂಡಿ-ಕಂಪ್ಲಿ ಗ್ರಾಮಗಳನ್ನು ಸಂಪರ್ಕಿಸಲು ಇರುವುದೇ ಈ ಹಳ್ಳದ ಮಾರ್ಗ. ಹಳ್ಳವೂ ತುಂಬಿ ಹರಿಯುತ್ತಿರುವುದರಿಂದ ಅದರ ಮೇಲೆಯೇ ಅಪಾಯವನ್ನು ಲೆಕ್ಕಿಸದೇ ಜನರು ಓಡಾಡುತ್ತಿದ್ದಾರೆ.
ರಸ್ತೆ, ಸೇತುವೆ ನಿರ್ಮಾಣ ಮಾಡುವಂತೆ ಸ್ಥಳೀಯರ ಒತ್ತಾಯ ಮಾಡುತ್ತಾ ಬಂದಿದ್ದರು ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.