ಸ್ವಯಂ ಪ್ರೇರಣೆಯಿಂದ ಲಾಕ್ ಡೌನ್ ಮಾಡಿಕೊಂಡು ಜಾತ್ರೆ ಮಾಡಿದ ಗ್ರಾಮಸ್ಥರು
ವಿಜಯಪುರ : ರಾಜ್ಯದಲ್ಲಿ ಪ್ರತಿ ದಿನ ಕೊರೊನಾ ಸ್ಫೋಟವಾಗುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಕೊರೊನಾ ಭೀತಿ ಹಿನ್ನೆಲೆ ರಾಜ್ಯದಲ್ಲಿ ಅದೆಷ್ಟೋ ಗ್ರಾಮಗಳಲ್ಲಿ ಗ್ರಾಮಸ್ಥರು ಸ್ವಯಂ ಲಾಕ್ ಡೌನ್ ಆಚರಣೆ ಮಾಡುತ್ತಿದ್ದಾರೆ. ಅದರಂತೆ ಸೋಂಕು ಹರಡುವಿಕೆಯನ್ನು ತಡೆಯಲು ಸ್ವಯಂ ಪ್ರೇರಣೆಯಿಂದ ತಮ್ಮ ಗ್ರಾಮವನ್ನು ಲಾಕ್ ಡೌನ್ ಮಾಡಿಕೊಂಡಿದ್ದ ಗ್ರಾಮಸ್ಥರು, ಇಂದು ಜಾತ್ರೆ ಮಾಡಿ ಬಾಡೂಟ ಸವಿದಿದ್ದಾರೆ.
ಹೌದು..! ವಿಜಯಪುರದ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ತಮ್ಮ ಗ್ರಾಮವನ್ನು ಲಾಕ್ ಡೌನ್ ಮಾಡಿಕೊಂಡಿದ್ದರು. ಆದ್ರೆ ಇವತ್ತು ಜಾತ್ರೆ ಹೆಸರಲ್ಲಿ ಮಟನ್ ಊಟ ತಯಾರಿಸಿ, ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಗುಂಪು ಗುಂಪಾಗಿ ಕುಳಿತು ಊಟ ಮಾಡಿದ್ದಾರೆ.
ಇಂದು ಗ್ರಾಮಸ್ಥರು ಊರಿನ ದುರ್ಗಾದೇವಿ ಹಾಗೂ ಸೇವಾಲಾಲ್ ಜಾತ್ರೆ ನಡೆಸಿದ್ದಾರೆ. ನಿನ್ನೆಯಷ್ಟೇ ಸ್ವಯಂ ಲಾಕ್ ಡೌನ್ ಮಾಡಿ ಬೇರೆ ಗ್ರಾಮಗಳಿಗೆ ಮಾದರಿಯಾಗಿದ್ದ ಕೂಡಗಿಯಲ್ಲಿ ನೂರಾರು ಜನ ಜಾತ್ರೆಯಲ್ಲಿ ಪಾಲ್ಗೊಂಡು, ಮುಖಕ್ಕೆ ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಪಾಡದೇ, ಜಾತ್ರೆಯನ್ನು ಮಾಡಿದ್ದಾರೆ.








