ಸಿಎಂ ಬದಲಾವಣೆ ವದಂತಿ : `ದೆಹಲಿಗೆ ಮರಿ ರಾಜಾಹುಲಿ’ vijayendra
ನವದೆಹಲಿ : ಕೊರೊನಾ ವೈರಸ್ ಕಾಟದ ಮಧ್ಯೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಕೂಡ ಜೋರಾಗಿದೆ.
ಸಿಎಂ ಬದಲಾವಣೆ ಇಲ್ಲ ಅಂತ ಹೇಳುತ್ತಿದ್ದರೂ ಬಿಜೆಪಿಯ ಒಳಕೆ ಈ ಬಗ್ಗೆ ಗಂಭೀರವಾಗಿ ಮಾತುಕತೆ ನಡೆಯುತ್ತಿದೆ.
ಈ ಮಧ್ಯೆ ಇಂದು ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ದಿಢೀರ್ ದೆಹಲಿಗೆ ಭೇಟಿ ನೀಡಿದ್ದು, ಭಾರಿ ಕುತೂಹಲ ಕೆರಳಿಸಿದೆ.
ಇಂದು ಬೆಳ್ಳಂಬೆಳಿಗ್ಗೆ ತನ್ನ ಆಪ್ತರೊಂದಿಗೆ ವಿಜಯೇಂದ್ರ ದೆಹಲಿಗೆ ಆಗಮಿಸಿದ್ದಾರೆ.
ಪಕ್ಷದ ಬಿಗ್ ಬಾಸ್ ಗಳು ಕೊರೊನಾ ನಿಯಂತ್ರಣದತ್ತ ಹೆಚ್ಚು ಗಮನ ಹರಿಸಿ ಎಂದು ಸೂಚಿಸಿದರೂ, ವಿಜಯೇಂದ್ರ ದೆಹಲಿಗೆ ಭೇಟಿ ನೀಡಿರುವುದು ಸಾಕಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ.
ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಸಹ ನಾಯಕತ್ವ ಬದಲಾವಣೆ ವಿಚಾರವಾಗಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
ಆದರೆ ಬಿಜೆಪಿಯ ಉಳಿದ ನಾಯಕರು ಯೋಗೇಶ್ವರ್ ವಿರುದ್ಧ ಗರಂ ಆಗಿ ತರಾಟೆಗೆ ತೆಗೆದುಕೊಂಡಿದ್ದರು.
ಬಿಜೆಪಿ ನಾಯಕರ ಹೇಳಿಕೆಯಿಂದ ಕಳೆದ ವಾರ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಜೋರಾಗಿ ನಡೆದು ತಣ್ಣಗಾಗಿತ್ತು.
ಆದ್ರೆ ನಿನ್ನೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯೋಗೇಶ್ವರ್ ಡಿಸಿಎಂ ಆದ್ರೆ, ಸಿಎಂ ಖುರ್ಚಿ ಉಳಿಯುತ್ತದೆ.
ಇಲ್ಲ ಅಂದ್ರೆ ಬಿಎಸ್ ವೈ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೇಳಿದ್ರು. ಈ ಚರ್ಚೆಗಳ ನಡುವೆ ಇಂದು ದಿಢೀರ್ ವಿಜಯೇಂದ್ರ ಅವರು ದೆಹಲಿಗೆ ಹೋಗಿದ್ದು ಈಗ ಯಾಕೆ ಎಂಬ ಕುತೂಹಲ ಮೂಡಿದೆ.