Vijayendra | ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ : ವಿಜಯೇಂದ್ರ ಹೇಳಿದ್ದೇನು..?
ಗದಗ : ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದ ವಿಚಾರವಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದ್ದು, ಕ್ರಿಯೆಗೆ ಪ್ರತಿಕ್ರಿಯೆ ಇದ್ದೆ ಇರುತ್ತೆ ಎಂದಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಹೈಕೋರ್ಟ್ ತೀರ್ಪಿನ ವಿರುದ್ಧ ಬಂದ್ ಆಚರಣೆ ಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ಮುಸ್ಲಿಂ ಸಮುದಾಯ ವ್ಯಾಪಾರಿಗಳು ಅಂಗಡಿ ಮುಗ್ಗಟ್ಟು ಬಾಗಿಲು ಹಾಕಿದ್ರು. ಈ ರೀತಿ ಪ್ರಕ್ರಿಯೆಗಳಿಂದ ಬೇರೆ ಬೇರೆ ಬೆಳವಣಿಗೆಗಳು ನಡೆಯುತ್ತಿವೆ. ಹೈಕೋರ್ಟ್ ತೀರ್ಪು ವಿರುದ್ಧ ನಡೆದುಕೊಂಡ ರೀತಿಯೇ ಇದಕ್ಕೆಲ್ಲ ಕಾರಣ ಎಂದು ಹೇಳಿದರು.
ಹಿಜಾಬ್ ನಂತರ ಆಗ್ತಿರೋ ಬೆಳವಣಿಗೆ ಯಾರಿಗೂ ಶೋಭೆ ತರುವಂತದ್ದಲ್ಲ. ಕಾಂಗ್ರೆಸ್ ಪಕ್ಷದವರು ಹತಾಶೆಯಾಗಿದ್ದಾರೆ. ಒಂದು ತಿಂಗಳಿನಿಂದ ಅಧಿಕಾರಕ್ಕೆ ಬಂದೇ ಬಿಟ್ವಿ ಅನ್ನೋ ಉತ್ಸಾಹದಲ್ಲಿ ಇದ್ರು. ಪಂಚ ರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಮುಖಂಡರಿಗೆ ನಿದ್ದೆ ಬರ್ತಿಲ್ಲ. ಬೇರೆ ಬೇರೆ ವಿಚಾರದಲ್ಲಿಯೂ ಗೊಂದಲಲ್ಲಿದ್ದಾರೆ. ಕರ್ನಾಟಕವೂ ಸಹ ಕಾಂಗ್ರೆಸ್ ಮುಕ್ತವಾಗಲು ಬೇರೆ ಯಾರೂ ಬೇಡ ಅವರ ಮುಖಂಡರೇ ಸಾಕು. ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತೆ. ಎಲ್ಲ ಧರ್ಮದವರು ಶಾಂತಿಯಿಂದ ಇರಬೇಕೆನ್ನುವುದು ಎಲ್ಲರಿಗೂ ಇದೆ. ಆದ್ರೆ ಹೈಕೋರ್ಟ್ ನಿರ್ಧಾರ ಬಂದ ನಂತರವೂ ಈ ರೀತಿಯ ಚಟುವಟಿಕೆಗನ್ನ ಯಾರೂ ಒಪ್ಪುವಂತದ್ದಲ್ಲ. ಎಲ್ಲರೂ ಸಮಾಧಾನದಿಂದ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ.