ಬಸಪ್ಪನ ಪವಾಡಕ್ಕೆ ಚಕಿತಗೊಂಡ ಗ್ರಾಮಸ್ಥರು Saaksha Tv
ಮಂಡ್ಯ: ದೇವಸ್ಥಾನದ ಪೂಜಾರಿಗಳನ್ನು ಆಯ್ಕೆ ಮಾಡುವ ಮೂಲಕ 58 ವರ್ಷಗಳಿಂದ ಇದ್ದ ಸಮಸ್ಯೆಯನ್ನು ಮಂಟೆಸ್ವಾಮಿ ಬಸಪ್ಪ ಬಗೆಹರಿಸಿದ್ದಾನೆ.
ಮಂಡ್ಯ ಜಿಲ್ಲೆಯ ದೊಡ್ಡಬಾಣಸವಾಡದಲ್ಲಿ ಕಳೆದ 58 ವರ್ಷಗಳಿಂದ ಚೌಡೇಶ್ವರಿ, ಪಟ್ಟಲದಮ್ಮ ಮತ್ತು ಮಾರ್ಗೋನಹಳ್ಳಿ ಅಮ್ಮ ದೇವಸ್ಥಾನಗಳಲ್ಲಿ ಪೂಜೆ ಮತ್ತು ಉತ್ಸವ ನಡೆಯುತ್ತಿರಲಿಲ್ಲ. ಕಾರಣ ಈ ದೇವಸ್ಥಾನಗಳಿಗೆ ಹಿಂದಿದ್ದ ಪೂಜಾರಿ 58 ವರ್ಷಗಳ ಹಿಂದೆ ವಯೋಸಹಜವಾಗಿ ತೀರಿಹೋಗಿದ್ದರು. ಅಂದಿನಿಂದ ಗ್ರಾಮದಲ್ಲಿ ಹಬ್ಬದ ಆಚರಣೆ ನಿಂತು ಹೋಗಿತ್ತು.
ಈ ದೇಗುಲಗಳಿಗೆ ಅರ್ಚಕರ ಆಯ್ಕೆ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದವನ್ನು ಇತ್ಯರ್ಥಗೊಳಿಸಲು ಗ್ರಾಮಸ್ಥರು ದೈವಿಸ್ವರೂಪಿ ಮಂಟೆಸ್ವಾಮಿ ಬಸಪ್ಪನ ಮೊರೆ ಹೋಗಿದ್ದಾರೆ. ಗ್ರಾಮಸ್ಥರ ಆಹ್ವಾನಕ್ಕೆ ಆಗಮಿಸಿದ ಮಂಟೆಸ್ವಾಮಿ ಬಸಪ್ಪ, ಮೊದಲಿಗೆ ಹಳೆ ಅರ್ಚಕರ ಬಳಿ ಹೋಗುತ್ತಾನೆ.
ಆಗ ಅರ್ಚಕರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ನಂತರ ಬಸಪ್ಪನಿಗೆ ಅರ್ಚಕರ ಆಯ್ಕೆ ಮಾಡುವ ಜವಾಬ್ದಾರಿ ನೀಡುತ್ತಾರೆ. ಅರ್ಚಕರಿಗೆ ಆಶಿರ್ವದಿಸಿ ಜನರ ಗುಂಪಿನ ಕಡೆ ನಡೆಯುವ ಬಸಪ್ಪ, ಗುಂಪಿನಲ್ಲಿ ಕುಳಿತಿದ್ದ ಮೂವರನ್ನು ಗುರುತಿಸಿ ಅವರನ್ನು ದೇಗುಲದ ಮುಂಭಾಗದಲ್ಲಿರುವ ಕೊಳ್ಳಕ್ಕೆ ತಳ್ಳುವ ಮೂಲಕ ಆಯ್ಕೆ ಮಾಡುತ್ತಾನೆ. ಮಂಟೆಸ್ವಾಮಿ ಬಸಪ್ಪನ ಈ ಆಯ್ಕೆ ಕಂಡು ಜನರು ಚಕಿತರಾಗುತ್ತಾರೆ.








