ರಾಜ್ಯದಲ್ಲಿ ಗಣ್ಯ ವ್ಯಕ್ತಿಗಳ ಸಂಚಾರ ವೇಳೆ ವಾಹನಗಳಲ್ಲಿ ಸೈರನ್ ಬಳಸುವುದನ್ನು ನಿಷೇಧಿಸಲಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು, ಸಾರ್ವಜನಿಕರ ಸುರಕ್ಷತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸೈರನ್ ನಿಷೇಧದ ಹಿಂದಿನ ಕಾರಣ
ಗಣ್ಯ ವ್ಯಕ್ತಿಗಳ ಸಂಚಾರ ವೇಳೆ ಸೈರನ್ ಬಳಸುವುದರಿಂದ ರಸ್ತೆಯಲ್ಲಿ ಜನರಿಗೆ ಗೊಂದಲ ಉಂಟಾಗುತ್ತದೆ. ಜೊತೆಗೆ, ಸೈರನ್ ನಿಂದಾಗಿ, ಗಣ್ಯರು ಯಾವ ರಸ್ತೆಯಲ್ಲಿ ಸಾಗುತ್ತಿದ್ದಾರೆ ಎಂಬ ಮಾಹಿತಿ ಅನಧಿಕೃತ ವ್ಯಕ್ತಿಗಳಿಗೆ ತಿಳಿದುಬಿಡುತ್ತದೆ. ಇದು ಭದ್ರತೆಗೆ ಅಪಾಯ ಉಂಟುಮಾಡುವ ಸಾಧ್ಯತೆ ಇದೆ ಎಂದು ಪೊಲೀಸ್ ಇಲಾಖೆಯು ತಿಳಿಸಿದೆ.
ಭದ್ರತೆ ಮತ್ತು ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಆದೇಶ
ಸಾಮಾನ್ಯ ಜನರಿಗೂ ಸದಾ ತೊಂದರೆ ಉಂಟುಮಾಡುವ ಸೈರನ್ ಶಬ್ದದಿಂದ ತಪ್ಪಿಸಿಕೊಳ್ಳಬೇಕು. ಇದರಿಂದ ರಸ್ತೆ ಸಂಚಾರ ವ್ಯವಸ್ಥೆ ಉತ್ತಮ ಆಗುವುದರ ಜೊತೆಗೆ ಶಬ್ದ ಮಾಲಿನ್ಯವನ್ನೂ ನಿಯಂತ್ರಿಸಬಹುದು. ಗಣ್ಯರ ಭದ್ರತೆಗಾಗಿ ಸೈರನ್ ನಿಷೇಧದ ಕ್ರಮ ಅಗತ್ಯವಿದೆ ಎಂದು ಡಿಜಿಪಿ ಎಂ.ಎ. ಸಲೀಂ ತಿಳಿಸಿದ್ದಾರೆ.
ಇನ್ನು ಮುಂದೆ ವಿಐಪಿ ಅಥವಾ ಗಣ್ಯ ವ್ಯಕ್ತಿಗಳ ವಾಹನಗಳಿಗೆ ಸೈರನ್ ಬಳಸಲು ಅವಕಾಶ ಇರುವುದಿಲ್ಲ. ಅಗತ್ಯವಿದ್ದರೆ ಕಾನೂನುಬದ್ಧ ವ್ಯವಸ್ಥೆಗಳಲ್ಲಿ ಮಾತ್ರ ಈ ವ್ಯವಸ್ಥೆ ಅನುಸರಿಸಬೇಕು. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಶಬ್ದ ಮಾಲಿನ್ಯವನ್ನೂ ಹೆಚ್ಚಿಸಬಾರದು, ಸಾರ್ವಜನಿಕರಿಗೂ ತೊಂದರೆ ಉಂಟು ಮಾಡಬಾರದು ಎಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ಪೊಲೀಸರಿಗೂ ಸ್ಪಷ್ಟ ನಿರ್ದೇಶನ
ರಾಜ್ಯದ ಎಲ್ಲ ಪೊಲೀಸ್ ಇಲಾಖೆಗಳಿಗೆ ಈ ಕುರಿತಂತೆ ಸ್ಪಷ್ಟ ನಿರ್ದೇಶನ ಜಾರಿ ಮಾಡಿದ್ದು, ಗಣ್ಯರ ಸಂಚಾರದ ವೇಳೆ ಭದ್ರತೆ ಕಾಯ್ದುಕೊಳ್ಳಲು ಇನ್ನು ಮುಂದೆ ಬದಲಿ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತದೆ. ಶಬ್ದ ಮಾಲಿನ್ಯ ನಿಯಂತ್ರಣ ಮತ್ತು ಜನರ ಸುರಕ್ಷತೆಗೆ ಇದು ಉತ್ತಮ ಹೆಜ್ಜೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.








