ಸಚಿನ್ ದಾಖಲೆ ಚಿಂದಿ ಉಡಾಯಿಸಿದ ವಿರಾಟ್
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. 8 ವರ್ಷಗಳ ಬಳಿಕ ಯಾವುದೇ ಜವಾಬ್ದಾರಿ ಇಲ್ಲದೇ ಸಾಮಾನ್ಯ ಆಟಗಾರರನಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿದ ವಿರಾಟ್, ಭಾರತದ ದಿಗ್ಗಜ ಬ್ಯಾಟರ್ ಗಳನ್ನು ಮೀರಿಸಿ ನಿಂತಿದ್ದಾರೆ.
ಹೌದು,.! ಕ್ರಿಕೆಟ್ ರಾಕ್ಷಸ ವಿರಾಟ್ ಕೊಹ್ಲಿ ಮೊದಲ ಚಾರ್ಮ್ ನಲ್ಲಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ, ಅವರ ಬ್ಯಾಟ್ ನಿಂದ ರನ್ ಗಳು ಸರಾಗವಾಗಿ ಬರುತ್ತಿಲ್ಲ ಎನ್ನೋದು ಕೂಡ ಒಪ್ಪಬೇಕಾದ ವಿಷಯವೇ. ಆದ್ರೆ ದಾಖಲೆಗಳನ್ನ ನಿರ್ಮಿಸುವಲ್ಲಿ ಮಾತ್ರ ವಿರಾಟ್ ಕೊಹ್ಲಿ ಹಿಂದೆ ಬಿದ್ದಿಲ್ಲ. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದು, ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನೇ ಅಳಿಸಿ ಹಾಕಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿರಬಹುದು. ಆದ್ರೆ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ದಾಖಲಿಸಿ ಮಿಂಚು ಹರಿಸಿದ್ದಾರೆ. 63 ಎಸೆತಗಳಲ್ಲಿ ಕೇವಲ ಮೂರು ಬೌಂಡರಿಗಳ ಸಹಾಯದಿಂದ ವಿರಾಟ್ ಕೊಹ್ಲಿ ಆಕರ್ಷಕ 51 ರನ್ ದಾಖಲಿಸಿದ್ದರು. ಆ ಮೂಲಕ ವಿರಾಟ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ನಾಯಕತ್ವದ ಜವಾಬ್ದಾರಿಯಿಂದ ತುಸು ಮಂಕಾಗಿದ್ದ ವಿರಾಟ್, ಇದೀಗ ಮತ್ತೆ ಮೊದಲಿನಂತೆ ಬ್ಯಾಟ್ ಬೀಸಲಾರಂಭಿಸಿದ್ದಾರೆ. ಅದರ ಪ್ರತಿಫಲವೆಂಬಂತೆ ಯಾವುದೇ ಜವಾಬ್ದಾರಿ ಇಲ್ಲದೇ ಸಾಮಾನ್ಯ ಕೇವಲ ಒಬ್ಬ ಬ್ಯಾಟರ್ ಆಗಿ ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ವಿದೇಶಿ ನೆಲದಲ್ಲಿ ಗರಿಷ್ಠ ರನ್ ದಾಖಲಿಸಿದ್ದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ತಮ್ಮ ನೆಚ್ಚಿನ ಕ್ರಿಕೆಟರ್ ಸಚಿನ್ ತೆಂಡುಲ್ಕರ್ ದಾಖಲೆಯನ್ನ ಪುಡಿಗಟ್ಟಿದ್ದಾರೆ.
ಏಕದಿನ ಕ್ರಿಕೆಟ್ ಮಾದರಿಯಲ್ಲಿ ವಿದೇಶಿ ನೆಲದಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಆಟಗಾರರ ಪಟ್ಟಿಯಲ್ಲಿ 5065 ರನ್ ಗಳ ಮೂಲಕ ಸಚಿನ್ ಮೊದಲ ಸ್ಥಾನದಲ್ಲಿದ್ದರು. ಇದೀಗ ವಿರಾಟ್, 5068 ರನ್ ಗಳ ಬಾರಿಸುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಸದ್ಯ ವಿರಾಟ್ ಮೊದಲ ಸ್ಥಾನದಲ್ಲಿದ್ದರೇ ಸಚಿನ್ ಎರಡನೇ ಸ್ಥಾನದಲ್ಲಿದ್ದಾರೆ. 4520 ರನ್ ಮೂಲಕ ಧೋನಿ ಮೂರನೇ ಸ್ಥಾನದಲ್ಲಿ, 3998 ರನ್ ಗಳೊಂದಿಗೆ ರಾಹುಲ್ ದ್ರಾವಿಡ್ ನಾಲ್ಕನೇ, 3468 ರನ್ ಗಳಿಂದ ದಾದಾ ಐದನೇ ಸ್ಥಾನದಲ್ಲಿದ್ದಾರೆ.