Virat Kohli : ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹೀಗೆ ಹೇಳಿದ್ದು ಯಾಕೆ..?
ಗುಜರಾತ್ ಟೈಟಾನ್ಸ್ ವಿರುದ್ಧ ಈ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ಎರಡನೇ ಅರ್ಧಶತಕ ಸಿಡಿಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಆಡಿದ ಶಾಟ್ ಗಳು ಬಹುದಿನಗಳ ನಂತರ ಹಳೆಯ ಕೊಹ್ಲಿಯನ್ನು ನೆನಪಿಸುವಂತಿದ್ದವು. 54 ಎಸೆತಗಳಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ವಿರಾಟ್ ಕೊಹ್ಲಿ 73 ರನ್ ಗಳಿಸಿದರು. ಒಂದು ರೀತಿಯಲ್ಲಿ ಆರ್‌ಸಿಬಿ ಪಂದ್ಯ ಗೆಲ್ಲಲು ಕೊಹ್ಲಿ ಉತ್ತಮ ಅಡಿಪಾಯ ಹಾಕಿದ್ದರು. ಪಂದ್ಯದ ಗೆಲುವಿನ ನಂತರ ಕೊಹ್ಲಿ ತಮ್ಮ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
“2022 ರ ಋತುವಿನಲ್ಲಿ ನಾನು ದೊಡ್ಡದಾಗಿ ಪ್ರದರ್ಶನ ನೀಡಲಿಲ್ಲ. ಪ್ರತಿ ವರ್ಷ ಒಳ್ಳೆ ಪ್ರದರ್ಶನ ನೀಡುತ್ತಿದ್ದ ನನಗೆ ಈ ಬಾರಿ ಅಂಕಿಅಂಶಗಳನ್ನು ನೋಡಿ ಅಚ್ಚರಿಯಾಯ್ತು. ತಂಡಕ್ಕಾಗಿ ಆಡಲಾಗುತ್ತಿಲ್ಲ ಅನ್ನೋ ನೋವು ನನ್ನಲ್ಲಿ ಹೆಚ್ಚಿತ್ತು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ನನ್ನ ಆಟ ನಮ್ಮ ತಂಡದ ಮೇಲೆ ಧನಾತ್ಮಕ ಪ್ರಭಾವ ಬೀರಿದೆ.
ಚೇಸಿಂಗ್ ಸಮಯದಲ್ಲಿ ತಂಡವು ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಆಲೋಚನೆಯನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ನಿರೀಕ್ಷೆಗಳಿಗೆ ತಕ್ಕಂತೆ ಮಿಂಚಬೇಕು ಅಂದ್ರೆ ಕ್ಷುಲ್ಲಕ ವಿಷಯಗಳನ್ನು ನಿರ್ಲಕ್ಷಿಸಿ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ನಿರಾಳವಾಗಿ ಆಡುವ ಯೋಜನೆ ಹಾಕಿಕೊಂಡಿದ್ದೆ. ಅದರಂತೆ ನನ್ನ ಇನ್ನಿಂಗ್ಸ್ ಮುಂದುವರೆಯಿತು.
ಇದರ ಹಿಂದೆ ಸಾಕಷ್ಟು ಶ್ರಮವಿದೆ. ಪಂದ್ಯದಲ್ಲಿ ಮಿಂಚಲು ನೆಟ್ಸ್ ನಲ್ಲಿ 90 ನಿಮಿಷಗಳ ಕಾಲ ಬ್ಯಾಟಿಂಗ್ ಅಭ್ಯಾಸ ಮಾಡಿದೆ. ಅದು ತುಂಬಾ ಸಹಾಯಕವಾಗಿತ್ತು. ಮೊದಲ ಓವರ್ ನಲ್ಲಿಯೇ ನಾನು ಒಳ್ಳೆಯ ಟಚ್ ನಲ್ಲಿದ್ದೇನೆ ಅಂತ ಅನಿಸಿತು. ಆ ಬಳಿಕ ಬೌಂಡರಿಗಳ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರಿ ರನ್ ಗಳಿಸಿದ್ದೆ. ಈ ಋತುವಿನಲ್ಲಿ ನಾನು ವಿಫಲವಾಗಿದ್ದರೂ, ಅಭಿಮಾನಿಗಳಿಂದ ಬೆಂಬಲ ಬಲವಾಗಿತ್ತು. ಅವರ ಪ್ರೀತಿಗೆ ನಾನು ಸದಾ ಋಣಿ ಎಂದಿದ್ದಾರೆ ವಿರಾಟ್ ಕೊಹ್ಲಿ. virat-kohli-his-form-i-batted-90-minutes-nets