ವಿರಾಟ್ – ರೋಹಿತ್ ಆಪ್ತಮಿತ್ರರೂ ಹೌದು.. ಟೀಮ್ ಇಂಡಿಯಾದ ಆಪ್ತ ರಕ್ಷಕರೂ ಹೌದು..!
Virat Kohli, Rohit sharma end cold war
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ.. ಟೀಮ್ ಇಂಡಿಯಾದ ಅದ್ಭುತ ಆಟಗಾರರು. ವಿರಾಟ್ ಕೊಹ್ಲಿ ಆಕ್ರಮಣಕಾರಿ ಪ್ರವೃತ್ತಿಯಿಂದ ಸುದ್ದಿಯಾದ್ರೆ, ರೋಹಿತ್ ಶರ್ಮಾ ಕೂಲ್ ಆಗಿದ್ದುಕೊಂಡೇ ಸುದ್ದಿಯಾಗುತ್ತಾರೆ.
ಅಂದ ಹಾಗೇ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಸಂಬಂಧ ಕೂಡ ಅಷ್ಟಕ್ಕಷ್ಟೇ. ಇದಕ್ಕೆ ಕಾರಣ ಹಿರಿತನ. ರೋಹಿತ್ ಶರ್ಮಾ ವಿರಾಟ್ ಕೊಹ್ಲಿಗಿಂತ ಮುನ್ನವೇ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದರು. ಜೊತೆಗೆ ರೋಹಿತ್ ಗಿಂತ ಹೆಚ್ಚು ವಿರಾಟ್ ಕೊಹ್ಲಿಗೆ ಅವಕಾಶಗಳು ಕೂಡ ಜಾಸ್ತಿ ಸಿಕ್ಕಿತ್ತು.
ಧೋನಿ ನಾಯಕತ್ವದಿಂದ ಕೆಳಗಿಳಿದಾಗ ವಿರಾಟ್ ಕೊಹ್ಲಿಗೆ ನಾಯಕತ್ವ ಒಲಿದು ಬಂತು. ಆದ್ರೆ ರೋಹಿತ್ ಶರ್ಮಾಗೆ ಅಂತಹ ಅವಕಾಶ ಸಿಗಲಿಲ್ಲ.
ಇನ್ನೊಂದೆಡೆ ರೋಹಿತ್ ಶರ್ಮಾ ಐಪಿಎಲ್ ನಲ್ಲಿ ಮುಂಬೈ ತಂಡದ ನಾಯಕನಾಗಿ ಐದು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರು. ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ.
ಇನ್ನೊಂದೆಡೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕನಾಗಿ ಯಶಸ್ವಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಅದೇ ರೀತಿ ಕೆಲವೊಂದು ಸರಣಿಗಳಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿ ಯಶ ಸಾಧಿಸಿದ್ದಾರೆ.
ಈ ನಡುವೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಸಂಬಂಧ ಅಷ್ಟಕ್ಕಷ್ಟೇ. ಇದಕ್ಕೆ ಕಾರಣಗಳು ಹಲವಾರು ಇವೆ. ಮುಖ್ಯವಾಗಿ 2019ರ ವಿಶ್ವಕಪ್ ನಂತರ ರೋಹಿತ್ ಮತ್ತು ವಿರಾಟ್ ಕೊಹ್ಲಿ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಮಾತುಗಳು ಜೋರಾಗಿ ಕೇಳಿಬಂದಿದ್ದವು.
ಇದಕ್ಕೆ ಪೂರಕವಾಗಿ ಹಲವಾರು ಘಟನೆಗಳು ನಡೆದಿದ್ದವು. ಆದ್ರೆ ಅದು ತಂಡದ ಮೇಲೆ ಹೆಚ್ಚಿನ ಪರಿಣಾಮ ಏನು ಬೀರುತ್ತಿರಲಿಲ್ಲ. ಇಬ್ಬರು ಆಟಗಾರರ ನಿಲುವುಗಳು, ಅಭಿಪ್ರಾಯಗಳು, ಮನಸ್ಥಿತಿಗಳು ಕೂಡ ಭಿನ್ನವಾಗಿದ್ದವು. ಅದು ಅಲ್ಲದೆ ರೋಹಿತ್ ಕೂಲ್ ಆಗಿಯೇ ತಂಡದ ಆಟಗಾರರ ಜೊತೆಗೆ ಬೆರೆಯುತ್ತಿದ್ರೆ, ಕೊಹ್ಲಿ ಆಕ್ರಮಣಕಾರಿಯಾಗಿರುತ್ತಿದ್ದರು.
ಈ ನಡುವೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಸಂಬಂಧ ಈಗ ಉತ್ತಮವಾಗಿದೆ. ಹಳೆಯದ ಘಟನೆಗಳನ್ನು ಮರೆತು ಈಗ ಜೊತೆಯಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಟಗಾರರು ಜೈವಿಕ ಸುರಕ್ಷತೆಯಲ್ಲಿದ್ದರು. ಹೀಗಾಗಿ ಆಟಗಾರರು ಹೊರಗಡೆ ಸುತ್ತಾಟ ನಡೆಸುವಂತಿರಲಿಲ್ಲ. ಏನಿದ್ರೂ ಹೊಟೇಲ್ ಮತ್ತು ಮೈದಾನದಲ್ಲೇ ಇರಬೇಕಾಗಿತ್ತು. ಇದು ಕೊಹ್ಲಿ ಮತ್ತು ರೋಹಿತ್ ನಡುವಿನ ಸಂಬಂಧವನ್ನು ಚೆನ್ನಾಗಿರುವಂತೆ ಮಾಡಿತ್ತು. ಇಂಗ್ಲೆಂಡ್ ಸರಣಿಯ ವೇಳೆ ಇಬ್ಬರು ಆಟಗಾರರು ಜೊತೆಯಾಗಿ ಕುಳಿತುಕೊಂಡು ಮಾತನಾಡುತ್ತಿದ್ದರು. ಪಂದ್ಯದ ರಣತಂತ್ರಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಅಷ್ಟೇ ಅಲ್ಲ, ಜೊತೆಯಾಗಿಯೇ ತಂಡದ ಇನಿಂಗ್ಸ್ ಕೂಡ ಆರಂಭಿಸಿದ್ದರು.
ಹೀಗೆ ಇಂಗ್ಲೆಂಡ್ ಸರಣಿ ಟೀಮ್ ಇಂಡಿಯಾಗೆ ಹಲವು ಪಾಠಗಳನ್ನು ಕಲಿಸಿದೆ. ಯುವ ಆಟಗಾರರ ಆರ್ಭಟದ ಮುಂದೆ ಹಿರಿಯ ಆಟಗಾರರು ದೊಸ್ತಿಗಳಾಗಿರುವುದು ಡ್ರೆಸಿಂಗ್ ರೂಮ್ ನ ವಾತಾವರಣವನ್ನು ಉತ್ತಮಗೊಳಿಸಿದೆ.
ಒಟ್ಟಿನಲ್ಲಿ ಈಗ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗ ಆಪ್ತಮಿತ್ರರಾಗಿದ್ದಾರೆ. ಟೀಮ್ ಇಂಡಿಯಾದ ಆಪ್ತರಕ್ಷಕರೂ ಆಗಿದ್ದಾರೆ.