ಕೊಹ್ಲಿ ಈ ಗ್ರಹದ ಅತಿದೊಡ್ಡ ಸೂಪರ್ ಸ್ಟಾರ್ : ವಾರ್ನ್
ಮೆಲ್ಬೋರ್ನ್ : ಕೊಹ್ಲಿಯಂಥ ಆಟಗಾರ ಅಥವಾ ಕ್ಯಾಪ್ಟನ್ ಇರುವಾಗ ಟೆಸ್ಟ್ ಕ್ರಿಕೆಟ್ ದೀರ್ಘಕಾಲ ಇರುವಂತೆ ಮಾಡಬಹುದು.
ಕೊಹ್ಲಿ ಈ ಗ್ರಹದ ಅತಿದೊಡ್ಡ ಸೂಪರ್ ಸ್ಟಾರ್ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಕಿಂಗ್ ಕೊಹ್ಲಿವನ್ನು ಆಕಾಶದ ಎತ್ತರಕ್ಕೇರಿಸಿದ್ದಾರೆ.
ಹೌದು..! ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸದಲ್ಲಿ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-1 ಅಂತರದಲ್ಲಿ ಗೆಲುವು ಸಾಧಿಸಿ, ಮಹತ್ವದ ಮುನ್ನಡೆ ಪಡೆದುಕೊಂಡಿದೆ.
ಅದರಲ್ಲೂ ಓವಲ್ ಮೈದಾನದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆಟ ಕ್ರಿಕೆಟ್ ದಿಗ್ಗಜರ ಮೆಚ್ಚುಗೆಗೆ ಪಾತ್ರವಾಗಿದೆ.
ಅದರಲ್ಲೂ ಬರೋಬ್ಬರಿ 50 ವರ್ಷಗಳ ನಂತರ ಓವಲ್ ನಲ್ಲಿ ಟೀಂ ಇಂಡಿಯಾ ಗೆಲುವಿನ ಕೇಕೆ ಹಾಕುವಂತೆ ಮಾಡಿದ ಕೊಹ್ಲಿ ಕ್ಯಾಪ್ಟನ್ಸಿ ಬಗ್ಗೆ ವಿಶ್ವ ಕ್ರಿಕೆಟ್ ಲೋಕದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದೇ ವಿಚಾರವಾಗಿ ಶೇನ್ ವಾರ್ನ್ ಮಾತನಾಡಿದ್ದು, ಟೀಂ ಇಂಡಿಯಾವನ್ನು ಹಾಗೂ ವಿರಾಟ್ ಕೊಹ್ಲಿಯನ್ನು ಹಾಡಿಹೊಗಳಿದ್ದಾರೆ.
‘ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವದ ಅತ್ಯುತ್ತಮ ತಂಡ. ಅಮೋಘ ರೀತಿಯಲ್ಲಿ ಜಯ ಸಾಧಿಸಿರುವ ಕೊಹ್ಲಿ ಪಡೆಗೆ ಅಭಿನಂದನೆಗಳು ಎಂದು ಶುಭಕೋರಿರುವ ವಾರ್ನ್, ಕೊಹ್ಲಿಗೆ ಎಲ್ಲ ಆಟಗಾರರಿಂದಲೂ ಮನ್ನಣೆ ಸಿಗುತ್ತದೆ.
ಆತನಿಗೋಸ್ಕರ ಮೈದಾನದಲ್ಲಿ ಎಲ್ಲರೂ ಆಡುತ್ತಿದ್ದಾರೆಂಬ ಭಾವನೆ ಮೂಡುತ್ತದೆ. ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುವ ರೀತಿಯಿಂದಾಗಿ ಆತನ ಮೇಲೆ ಪ್ರತಿಯೊಬ್ಬರೂ ನಂಬಿಕೆ ಇಟ್ಟಿದ್ದಾರೆ.
ಹೀಗಾಗಿ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಯಶಸ್ವಿಯಾಗಿದ್ದಾರೆ ಎಂದು ಓವಲ್ ಗೆಲುವಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಕೊಹ್ಲಿಯಂಥ ಕ್ಯಾಪ್ಟನ್ ಇರುವಾಗ ಟೆಸ್ಟ್ ಕ್ರಿಕೆಟ್ ದೀರ್ಘಕಾಲ ಇರುವಂತೆ ಮಾಡಬಹುದು. ಕೊಹ್ಲಿ ಈ ಗ್ರಹದ ಅತಿದೊಡ್ಡ ಸೂಪರ್ ಸ್ಟಾರ್ ಎಂದು ಹೊಗಳಿದ್ದಾರೆ.
ಕೇವಲ ವಾರ್ನ್ ಅಲ್ಲದೇ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮುಲ್ ಹಕ್ ಕೂಡ ವಿರಾಟ್ ಕೊಹ್ಲಿ ಅವರನ್ನ ಹಾಡಿಹೊಗಳಿದ್ದಾರೆ.