ಬೆಂಗಳೂರು: ಡಿ.ಕೆ ಶಿವಕುಮಾರ್ ಅವರು ಇಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇಂದು ಬೆಳಿಗ್ಗೆ 11.30ಕ್ಕೆ ಬರೋಬ್ಬರಿ 10 ಲಕ್ಷ ಮಂದಿ ಕಾರ್ಯಕರ್ತರ ಸಮ್ಮುಖದಲ್ಲಿ ಕಾಂಗ್ರೆಸ್ ಕಟ್ಟಪ್ಪ ಶಿವಕುಮಾರ್ ಕೆಪಿಸಿಸಿಯ 41ನೇ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿ ಪ್ರಸಾದ ಕಳುಹಿಸಿದ್ದಾರೆ.
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕಾರ್ಯದರ್ಶಿ ಕೃಷ್ಣಾ ಸಿಂಗ್ ಅವರು ಡಿ.ಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಬಂದು ಶ್ರೀ ಮಂಜುನಾಥನ ಪ್ರಸಾದ ನೀಡಿದ್ದಾರೆ. ಜೊತೆಗೆ ಪದಗ್ರಹಣ ಕಾರ್ಯಕ್ರಮ ಯಶಸ್ಸಿಗೆ ಆಶೀರ್ವಾದ ಮಾಡಿ ಸುತ್ತೂರು ಶ್ರೀಗಳಿಂದಲೂ ಡಿಕೆಶಿಗೆ ಪ್ರಸಾದ ಕಳುಹಿಸಿ ಕೊಟ್ಟಿದ್ದಾರೆ.