ವಿಶ್ವವಿನೂತನ, ವಿದ್ಯಾಚೇತನ, ಚನ್ನವೀರ ಸರ್ವಹೃದಯ ಸಂಸ್ಕಾರಿ Saaksha Tv
ಧಾರವಾಡ: ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ ಎಂದೇ ಪ್ರಸಿದ್ಧರಾದ ಹಿರಿಯ ಕವಿ, ನಾಡೋಜ ಚೆನ್ನವೀರ ಕಣವಿ (93) ಅವರು ವಿಧಿವಶರಾಗಿದ್ದಾರೆ.
ಜೂನ್ 28, 1928ರಂದು ಧಾರವಾಡ ಜಿಲ್ಲೆಯ ಹೊಂಬಳದಲ್ಲಿ ಜನಿಸಿದ್ದ ಚನ್ನವೀರ ಕಣವಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಂಎ ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ಪ್ರಸರಣ ಮತ್ತು ಪ್ರಕಟಣಾ ವಿಭಾಗದ ಕಾರ್ಯದರ್ಶಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಸಾಹಿತಿ ಚನ್ನವೀರ ಕಣವಿಯವರು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದವರು. ತಮ್ಮ 93 ವರ್ಷದ ತುಂಬು ಜೀವನದಲ್ಲಿ ಕನ್ನಡ ಸಾಹಿತ್ಯವನ್ನು ಉಸಿರಾಗಿಸಿಕೊಂಡವರು. ಇವರು ನಾಡುಕಂಡ ಕಂಡ ಅತ್ಯಂತ ಸೃಜನ ಶೀಲ ಸಾಹಿತ್ಯ ರಚನೆ ಕಾರರು. ಸಜ್ಜನಿಕೆಯ ಸಾಕಾರ ಮೂರ್ತಿ, ಅವರ ಮಾತುಗಳು ,ಮೃದು ಮತ್ತು ಮನಸ್ಸಿಗೆ ಮುಟ್ಟುವಂತಹ ಮಾತುಗಳು. ಅವರದು ಅಪರೂಪದ ವ್ಯಕ್ತಿತ್ವ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂತಹ ಸಾಹಿತ್ಯ ರಚನೆ ಮಾಡಿದ್ದರು. ಸಾಹಿತ್ಯ ಮುಖಾಂತರ ಕಲ್ಪನೆ ಮತ್ತು ವಾಸ್ತವಾಂಶವನ್ನು ಬಿಂಬಿಸಿದವರು. ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದು, ಪ್ರಶಸ್ತಿಗೆ ಗೌರವ ಬರುವ ರೀತಿಯಲ್ಲಿ ಅವರ ವ್ಯಕ್ತಿತ್ವವಿತ್ತು.
ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಳು
ಜನಪ್ರಿಯ ಕಾವ್ಯ ವಿಶ್ವಭಾರತಿಗೆ ಕನ್ನಡದಾರತಿ, ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ, ಹೂವು ಹೊರಳುವುವು ಸೂರ್ಯನ ಕಡೆಗೆ, ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಇನ್ನೂ ಡಾ. ಚನ್ನವೀರ ಕಣವಿ ಮೊದಲ ಕವಲ ಸಂಕಲನ ಕಾವ್ಯಾಕ್ಷಿ 1949ರಲ್ಲಿ ಬಿಡುಗಡೆಯಾಗಿತ್ತು, ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ಮಣ್ಣಿನ ಮೆರವಣಿಗೆ, ದಾರಿ ದೀಪ, ನೆಲ ಮುಗಿಲು, ಎರಡು ದಡ, ನಗರದಲ್ಲಿ ನೆರಳು, ಜೀವಧ್ವನಿ, ಕಾರ್ತಿಕದ ಮೋಡ, ಜೀನಿಯಾ, ಹೊಂಬೆಳಕು, ಶಿಶಿರದಲ್ಲಿ ಬಂದ ಸ್ನೇಹಿತ, ಚಿರಂತನ ದಾಹ, ಸೇರಿ 15ಕ್ಕೂ ಹೆಚ್ಚು ಕವನ ಸಂಕಲನಗಳು ಪ್ರಕಟಗೊಂಡಿವೆ.
ಸಾಹಿತ್ಯಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಮಧುರಚೆನ್ನ, ಸಮತೋಲನ ಇವರ ವಿಮರ್ಶಾತ್ಮಕ ಕೃತಿಗಳು, ಹಕ್ಕಿ ಪುಕ್ಕ ಮತ್ತು ಚಿಣ್ಣರ ಲೋಕವ ತೆರೆಯೋಣ ಕವನ ಸಂಕಲನ ಮಕ್ಕಳ ಕೃತಿಗಳು
ಸಂದ ಪ್ರಶಸ್ತಿಗಳು
ಇವರಿಗೆ 1981ರಲ್ಲಿ ಜೀವಧ್ವನಿ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1996ರಲ್ಲಿ ಹಾಸನದಲ್ಲಿ ನಡೆದ 65ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ, 2008ರಲ್ಲಿ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷತೆ, ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಬಸವ ಗುರು ಕಾರುಣ್ಯ ಪ್ರಶಸ್ತಿ ನೀಡಲಾಗಿದೆ. ಅಲ್ಲದೇ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ, ಅನಕೃ ನಿರ್ಮಾಣ ಪ್ರಶಸ್ತಿ, 2020ರಲ್ಲಿ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.








