ರಾಜ್ಯದಲ್ಲಿ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಸಾರಿಗೆ ಸಂಸ್ಥೆಯು ಪ್ರಯಾಣಿಕರಿಗೆ ನೀಡುವ ಟಿಕೆಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳ ಮೂಲಕ ಸಾರ್ವಜನಿಕರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈ ಕಾರ್ಯಕ್ಕೆ ಮುಂದಾಗಿದೆ. ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಕಾರ್ಯೋನ್ಮುಖವಾಗಿವೆ. ಅದೇ ರೀತಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಹ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಬಸ್‌ಗಳಲ್ಲಿ ಪ್ರಯಾಣಿಕರಿಗೆ ನೀಡುವ ಟಿಕೆಟ್‌ನ ಕೆಳಭಾಗದಲ್ಲಿ ‘2023ರ ಮೇ 10ರಂದು ತಪ್ಪದೇ ಮತದಾನ ಮಾಡಿರಿ’ ಎಂಬುದಾಗಿ ಮುದ್ರಿಸಲಾಗುತ್ತಿದೆ. ಸಂಸ್ಥೆಯ ಟ್ವೀಟರ್, ಇನ್‌ಸ್ಟಾಟಾಗ್ರಾಂ ಹಾಗೂ ಫೇಸ್‌ಬುಕ್ ಪೇಜ್‌ನಲ್ಲಿ ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ. ‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಮೇ 10ರಂದು ತಪ್ಪದೇ ಮತದಾನ ಮಾಡಿರಿ’. ಮೇ 10ರಂದು ನಮ್ಮ ನಡಿಗೆ-ಮತಗಟ್ಟೆಯ ಕಡೆಗೆ ಸೇರಿದಂತೆ ಮುಂತಾದ ಸಂದೇಶವಿರುವ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ.
ಸಂಸ್ಥೆಯ ಬಸ್‌ಗಳಲ್ಲಿ ನಿತ್ಯ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಾರೆ. ಸಾವಿರಾರು ಜನ, ಸಂಸ್ಥೆಯ ಟ್ವೀಟರ್, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಫಾಲೋವರ್ಸ್ ಇದ್ದಾರೆ. ಅವರಲ್ಲಿ ಬಹಳಷ್ಟುಮಂದಿ 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದು ಮತದಾನದ ಹಕ್ಕು ಹೊಂದಿದ್ದಾರೆ. ಹೀಗಾಗಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.








