ಚಿತ್ರದುರ್ಗ: “ಇಷ್ಟು ದಿನ ರೇಷನ್ ಇತ್ತು, ಊಟ ಮಾಡಿದ್ವಿ. ಅಕ್ಕಿ, ಬೇಳೆ ಎಲ್ಲ ಖಾಲಿ ಆಗಿದೆ. ಗಂಜಿ ಹಿಟ್ಟು ಕೂಡ ಇಲ್ಲ. ಕುಡಿಯುವ ನೀರೂ ಇಲ್ಲ” ಇದು ಸುಡುಗಾಡು ಸಿದ್ಧರ ಕಣ್ಣೀರಿನ ಕಥೆ.
ಹೌದು..! ಮಹಾಮಾರಿ ಕೊರೊನಾ ವೈರಸ್ ಕೋಟ್ಯಾಂತರ ಜನರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ದೇಶದಲ್ಲಿ ಕೊರೊನಾ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಸರಿಯಾಗಿ ಊಟ, ನೀರಿಲ್ಲದೇ ಇಲ್ಲಿ ನೆಲೆ ಇಲ್ಲದವರು ಪರಿತಪಿಸುತ್ತಿದ್ದಾರೆ.
ಚಿತ್ರದುರ್ಗ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗೇಟ್ ಬಳಿ ಇರುವ ಹಾಗೂ ಚಿತ್ರದುರ್ಗ ತಾಲೂಕಿನ ಹಿರೆಗೊಂಟುನೂರು ಹೋಬಳಿಯ ಅಳಲೂರ್ ಗ್ರಾಮದ ಸುಡುಗಾಡು ಸಿದ್ಧರು ಇದಕ್ಕೆ ಹೊರತಾಗಿಲ್ಲ. ಲಾಕ್ ಡೌನ್ ನಿಂದಾಗಿ ಸುಡುಗಾಡು ಸಿದ್ಧರು ಬದುಕು ಸಾಗಿಸುವುದೇ ಕಷ್ಟವಾಗಿ ಬಿಟ್ಟಿದೆ.
“ಇಷ್ಟು ದಿನ ರೇಷನ್ ಇತ್ತು, ಊಟ ಮಾಡಿದ್ವಿ. ಅಕ್ಕಿ, ಬೇಳೆ ಎಲ್ಲ ಖಾಲಿ ಆಗಿದೆ. ಗಂಜಿ ಹಿಟ್ಟು ಕೂಡ ಇಲ್ಲ. ಕುಡಿಯುವ ನೀರೂ ಇಲ್ಲ” ಎಂದು ಸುಡುಗಾಡು ಸಿದ್ಧರು ಪರದಾಡುತ್ತಿದ್ದಾರೆ.ಗ್ರಾಮದಿಂದ ಹೊರ ಹೋಗಲು ಸಾಧ್ಯವಾಗದೆ, ಭಿಕ್ಷೆ ಬೇಡಲು ಆಗದೆ ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದಾರೆ. ಏನಾದರೂ ಮಾಡಿ ಸಹಕಾರ ನೀಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಒಂದೊತ್ತಿನ ಊಟಕ್ಕಾಗಿ ಪಾತ್ರೆ ಹಿಡಿದು ಅಂಗಲಾಚುತ್ತಿದ್ದಾರೆ. ನಾವು ಬಡವರು, ಅನಾಥರು ಸ್ವಾಮಿ, ಮಕ್ಕಳಿಗೆ ಊಟಕ್ಕಿಲ್ಲ. ಕಣ್ಣೀರಲ್ಲಿ ಕೈ ತೊಳೆಯುವ ಸ್ಥಿತಿ ಬಂದಿದೆ ಎಂದು ಒಪ್ಪೊತ್ತಿನ ಊಟಕ್ಕೆ ಇಲ್ಲ ಎಂದು ಸುಡುಗಾಡು ಸಿದ್ಧರು ಕಣ್ಣೀರಿಡುತ್ತಿದ್ದಾರೆ.








