ಬೆಂಗಳೂರು: ಕರ್ನಾಟಕದಲ್ಲಿ ಹೇಗಾದರೂ ಮಾಡಿ ಕಾಂಗ್ರೆಸ್ ನ್ನು ವೀಕ್ ಮಾಡಲು ಬಿಜೆಪಿ–ಜೆಡಿಎಸ್ ಪ್ರಯತ್ನಿಸುತ್ತಿವೆ. ಆದರೆ, ಅವುಗಳ ಪಿತೂರಿಗೆ ಜಗ್ಗುವುದಿಲ್ಲ. ನಾವು ಜನರ ಬಳಿಗೆ ಹೋಗುತ್ತೇವೆ. ಅವರಿಗೆ ವಾಸ್ತವಾಂಶ ವಿವರಿಸುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ (K.C.Venugopal) ಹೇಳಿದ್ದಾರೆ.
ಸಿಎಂ ಅವರ ನಿವಾಸದಲ್ಲಿ ಸಚಿವರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಗಂಭೀರ ಬೆಳವಣಿಗೆಗಳ ಕುರಿತು ರಾಜ್ಯದ ಸಚಿವರೊಂದಿಗೆ ಚರ್ಚಿಸಲಾಗಿದೆ. ರಾಜ್ಯ ಬಿಜೆಪಿಗೆ ಸರ್ಕಾರ ಉರುಳಿಸುವ ಖಯಾಲಿ ಇದ್ದೇ ಇದೆ. 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿದ್ದೇ ಬಿಜೆಪಿ. ಅದೇ ರೀತಿಯ ಸ್ಪಷ್ಟ ಸಂದೇಶದಿಂದ ಬಿಜೆಪಿ ಈ ರೀತಿ ಮಾಡುತ್ತಿದೆ ಎಂದು ಗುಡುಗಿದ್ದಾರೆ.
ಸಿದ್ದರಾಮಯ್ಯ ಅವರು ಬೆಳೆದು ಬಂದ ಹಾದಿ ಇಡೀ ಕರ್ನಾಟಕದ ಜನರಿಗೆ ತಿಳಿದಿದೆ. ಸಿದ್ದರಾಮಯ್ಯನವರ ಪ್ರಾಮಾಣಿಕತೆಯ ಅರಿವಿದೆ. ಅವರು ಮುಖ್ಯಮಂತ್ರಿ ಪದವಿಗೆ ಹೊಸಬರಲ್ಲ. ಅವರ ರಾಜಕೀಯ ಬದುಕು, ತತ್ವ ಸಿದ್ಧಾಂತ, ಹಿನ್ನೆಲೆ ಅವರು ಹಿಂದೆ ಹೇಗಿದ್ದರು. ಈಗ ಹೇಗಿದ್ದಾರೆ. ಇದನ್ನು ಪ್ರತಿಯೊಬ್ಬ ಕನ್ನಡಿಗನು ಹೇಳುತ್ತಾನೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಬಡವರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಇದು ರಾಜಕೀಯವಾಗಿ ನಷ್ಟ ಉಂಟು ಮಾಡುವುದು ಹಾಗೂ ವಿವಿಧ ಪ್ರಕರಣಗಳ ತನಿಖೆಯಿಂದ ವೈಯಕ್ತಿಕವಾಗಿಯೂ ಅವರಿಗೆ ತೊಂದರೆಯಾಗಲಿದೆ ಎಂಬುದು ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಕೆಲವು ಆರೋಪಗಳನ್ನು ಮಾಡುವ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಮಾತನಾಡುವುದು ಹಾಸ್ಯಾಸ್ಪದ. ವಿಜಯೇಂದ್ರ ಮೇಲೆ ಎಷ್ಟು ಆರೋಪಗಳಿವೆ? ಪ್ರಜ್ವಲ್ ರೇವಣ್ಣ ವಿರುದ್ಧ ಎಷ್ಟು ಆರೋಪಗಳಿವೆ? ಅಂಥವರು ಸಭ್ಯರೆಂಬ ಸೋಗಿನಲ್ಲಿ ತಮ್ಮ ರಾಜಕೀಯ ಜೀವನದುದ್ದಕ್ಕೂ ಜನಪರ ಹಾಗೂ ಪ್ರಾಮಾಣಿಕ ಮುಖ್ಯಮಂತ್ರಿಯ ವಿರುದ್ಧ ಆರೋಪ ಮಾಡುವುದನ್ನು ರಾಜ್ಯದ ಜನರೂ ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ.