ನಿನ್ನೆ ಶಾಸಕ ರೇಣುಕಾಚಾರ್ಯ ಅವರನ್ನು ತಾಲೂಕು ಬಿಟ್ಟು ಇಲ್ಲಿಗೆ ಯಾಕೆ ಬಂದಿದ್ದೀರಾ ಎಂದು ಕೇಳಿದ್ದ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಇಂದು ಅಧಿಕಾರಿಗಳ ಸಭೆಯಲ್ಲಿ ರೇಣುಕಾಚಾರ್ಯ ತಿರುಗೇಟು ಕೊಟ್ಟಿದ್ದಾರೆ.
ಇಂದು ದಾವಣೆಗೆರೆಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ರೇಣುಕಾಚಾರ್ಯ,ಇದು ಒಳ್ಳೆಯ ಬೆಳವಣಿಗೆಯಲ್ಲ. ನಾನು ಜನ ಸೇವೆ ಮಾಡೋಕೆ ಜನಪ್ರತಿನಿಧಿ ಆಗಿರೋದು, ಹೆಂಡ್ರು- ಮಕ್ಕಳು ಜೊತೆ ಕೂತ್ಕೊಂಡು ಊಟ ತಿಂಡಿ ಮಾಡಿ ಮನೆಯಲ್ಲಿ ಇರೋಕೆ ಅಲ್ಲಾ. ನಮಗೂ ಕರ್ತವ್ಯ, ಜವಾಬ್ದಾರಿ ಇದೇ. ಹಾಗಾಗಿ ಜನರಿಗೆ ತಿಳಿವಳಿಕೆ ನೀಡುವ ಕೆಲಸ ಮಾಡೋದು ನಮ್ಮ ಕೆಲಸ. ನಮಗೂ ಜವಾಬ್ದಾರಿ ಇದೇ. ಜಿಲ್ಲಾಧಿಕಾರಿ ಈ ರೀತಿ ಊಡಾಫೆಯಾಗಿ ಮಾತಾಡಬಾರದು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ದಾವಣಗೆರೆ ಮತ್ತು ಮತಕ್ಷೇತ್ರ ಹೊನ್ನಾಳಿಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೊರೊನಾ ವೈರಸ್ ನಿಯಂತ್ರಣ ಕುರಿತ ಜಾಗೃತಿಗಾಗಿ ಓಡಾಡುತ್ತಿದ್ದು, ಅವರ ಹಿಂದೆ ಬೆಂಬಲಿಗರು ಕಾರ್ಯಕರ್ತರ ಪಡೆಯೇ ತಿರುಗುತ್ತಿತ್ತು. ಸಾಮಾಜಿಕ ಅಂತರದ ಬಗ್ಗೆ ಪಾಠ ಹೇಳುವ ರೇಣುಕಾಚಾರ್ಯರ ಹಿಂಬಾಲಿಕರು ಮಾತ್ರ ದಂಡುದಂಡಾಗಿ ರಸ್ತೆಗಳಿಗೆ ಲಗ್ಗೆ ಇಟ್ಟಿದ್ದರು.. ಇದನ್ನು ಗಮನಿಸಿದ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಶಾಸಕ ರೇಣುಕಾಚಾರ್ಯರನ್ನು ತರಾಟೆಗೆ ತೆಗೆದುಕೊಂಡಿದ್ದರು.








