ದ್ವಿತೀಯ ಪಿಯುಸಿ ಪರೀಕ್ಷೆಗು ಹಿಜಾಬ್ ಬ್ಯಾನ್
ಬೆಂಗಳೂರು: ಹಿಜಾಬ್ ಧರಿಸಿಕೊಂಡು ದ್ವಿತೀಯ ಪಿಯುಸಿ ಪರೀಕ್ಷೆಗೆ ಬಂದರೆ ಪರೀಕ್ಷೆಗೆ ಅವಕಾಶ ನೀಡಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.
ಈ ಕುರಿತು ಮಾದ್ಯಮದವರೊಂದಿಗೆ ಮಾತನಾಡಿದ ಅವರು ಇನ್ನೇನು ಕೆಲವೇ ದಿನಗಳಲ್ಲಿ ದ್ವಿತೀಯ ಪರೀಕ್ಷೆ ಪ್ರಾರಂಭವಾಗಲಿದ್ದು, ಪರೀಕ್ಷೆಗೆ ಹಿಜಾಬ್ ಧರಿಸಿಕೊಂಡು ಬಂದರೆ ಪರೀಕ್ಷೆಗೆ ಅವಕಾಶ ನೀಡಲ್ಲ. ಈ ಸಂಬಂಧ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ಅಲ್ಲದೇ ರಾಜ್ಯದ ಜಿಲ್ಲಾ ಕಾಲೇಜುಗಳಲ್ಲಿ ಶೇ.90ರಷ್ಟು ಸಮವಸ್ತ್ರ ಇದೆ. ಶೇ.10ರಷ್ಟು ಕಾಲೇಜುಗಳಲ್ಲಿ ಮಾತ್ರ ಸಮವಸ್ತ್ರ ಇಲ್ಲ. ಯಾವುದೇ ಧರ್ಮಸೂಚಕ ವಸ್ತ್ರ ಧರಿಸಿ ಬರುವಂತಿಲ್ಲ. ಆಯಾ ಕಾಲೇಜುಗಳ ಎಸ್ಡಿಎಮ್ಸಿ ಸೂಚನೆಗಳನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹೇಳಿದರು.
ಹಾಗೇ ಹೈಕೋರ್ಟ್ ನೀಡಿದ ತೀರ್ಪಿನಂತೆ ಸಮವಸ್ತ್ರ ಪಾಲನೆ ಮಾಡುತ್ತಿದ್ದೇವೆ. ಮುಖ್ಯ ಪರೀಕ್ಷೆಗೆ ಗೈರಾದವರಿಗೆ ಮರುಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಏ.22ರಿಂದ ಮೇ 18ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತದೆ. SSLC ಬೆನ್ನಲ್ಲೇ ಪಿಯುಸಿ ಪರೀಕ್ಷೆಗೂ ಹಿಜಾಬ್ ಬ್ಯಾನ್ ಮಾಡಲಾಗುವುದು ಎಂದರು.