ಒಂಟಿ ಕಾಲಿನಲ್ಲಿ ʼಖೇಲಾ ಹೂಬೆʼ ಎನ್ನುತ್ತಾ ಚೆಂಡನ್ನೊದ್ದು ಪ್ರಧಾನಿಗಳ ಮಕಾಡೆ ಮಲಗಿಸಿದಳಾ ದೀದಿ ಓ ದೀದಿ:
“ಕೇಂದ್ರದ ಕಮಲ ನಾಯಕರಿಗೆ ಕೆರೆ ನೀರು ಕುಡಿಸಿದಳು ಬೆಂಗಾಳಿ ಕಾಳಿ ಮಮತಾ; ಕುಸಿಯುತ್ತಿರುವ ಮೋದಿ ಅಲೆ, ಕಾಂಗ್ರೆಸ್ ನ ಸರ್ವನಾಶದ ಮುನ್ಸೂಚನೆ, ಎಡರಂಗದ ಹೀನ ರಾಜಕಾರಣ ಎಷ್ಟೆಲ್ಲಾ ಕಥೆ ಹೇಳಿತು ಈ ಚುನಾವಣೆ:”
ಪಾಪ ಮೋದಿ ಜೀ ಮತ್ತು ಷಾ ಹಗಲೂ ರಾತ್ರಿ ಕರೋನಾ ಎರಡನೆಯ ಅಲೆಯ ಗಂಭೀರತೆಯನ್ನು ಅಲಕ್ಷಿಸಿ, ಜೀವದ ಹಂಗು ತೊರೆದು (ಯಾರ ಜೀವ ಅಂತ ಕೇಳಬೇಡಿ) ಪ್ರಚಾರ ಮಾಡಿಯೂ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಎನ್.ಡಿ.ಎ ಮೈತ್ರಿಕೂಟ ಅಧಿಕಾರಕ್ಕೆ ಬರಲ್ಲಾ ಅಂದ್ರೆ ಹೇಗಾಗಬೇಡ? ಹೇಗೆ ತಡ್ಕೋಬೇಕು ಸ್ವಾಮಿ ಬಿಜೆಪಿ ಭಕ್ತರ ಜೀವ? ಚುನಾವಣಾ ಫಲಿತಾಂಶದ ವರದಿ ನೋಡಿ ಮೋದಿ ಜೀ ಕಣ್ಣಲ್ಲಿ ಕಂಬನಿ ಬಂದರೇ, ನಮ್ಮ ಭಕ್ತರ ಕಂಗಳಲ್ಲಿ ರಕ್ತ ಕಣ್ಣೀರು ಧಾರೆ… ಧಾರೆ…
ಪಶ್ಚಿಮ ಬಂಗಾಳದ 294 ಸ್ಥಾನಗಳ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಾರೂಢ ತೃಣಮೂಲ ಕಾಂಗ್ರೆಸ್ ಕೊನೆಗೂ ಮೂರನೆಯ ಬಾರಿಗೆ ಭರ್ಜರಿ ದಿಗ್ವಿಜಯ ಸಾಧಿಸಿದೆ. ತನ್ಮೂಲಕ ಭಾವಿ ಪ್ರಧಾನಿ ಎಂದೇ ಕರೆಸಿಕೊಳ್ಳುತ್ತಿರುವ ಸಿಡಿಲಮರಿ, ಉರಿಮಾರಿ ಮಮತಾ ದೀದಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಪ್ರಾಯಶಃ ಈ ಚುನಾವಣೆ ಮಮತಾ ಬದುಕಿನ ಅತ್ಯಂತ ಮಹತ್ವದ ಘಟ್ಟ ಎಂದರೆ ತಪ್ಪಾಗುವುದಿಲ್ಲ; ಈ ಹಿಂದಿನ ಎಲ್ಲಾ ಚುನಾವಣೆಗಳಿಗಿಂತ ಹೆಚ್ಚಿನ ಕಸವು, ಪರಿಶ್ರಮ ಮತ್ತು ರಕ್ತ ಸಹಿತ ಬೆವರು ಹರಿಸಬೇಕಾಯಿತು ಮಮತಾ. ಈ ಸಲದ ಚುನಾವಣೆಯಲ್ಲಿ ದೀದಿ ವಿರುದ್ಧ ಇಡೀ ಕೇಂದ್ರ ಸರ್ಕಾರವೇ ತನ್ನೆಲ್ಲಾ ಅಧಿಕಾರ ಯಂತ್ರಗಳನ್ನು ಸಜ್ಜುಗೊಳಿಸಿ ಬಂಗಾಳಕ್ಕೆ ಕೊಂಡೊಯ್ದಿತ್ತು. ಕನಿಷ್ಟ ಒಂದು ಹೆಣ್ಣು ಎಂದೂ ನೋಡದೇ ಪ್ರಧಾನಿಗಳ ಸಹಿತ ಸಂಸ್ಕೃತಿ ರಕ್ಷಕರ ಪಕ್ಷದ ಪ್ರತಿಯೊಬ್ಬ ಪುಢಾರಿಯೂ ವೇದಿಕೆ ಸಿಕ್ಕಲ್ಲೆಲ್ಲಾ ಮಮತಾ ಬ್ಯಾನರ್ಜಿಯವರನ್ನು ಹಣಿದಿದ್ದೇನು! ಕೊಲೆಗಡುಕಿ ಎಂದು ಹಣೆಪಟ್ಟಿ ಕಟ್ಟಿದ್ದೇನು! ದೀದಿ ಓ ದೀದಿ ಎಂದು ಪಡ್ಡೆ ಹುಡುಗರಂತೆ ಅಣಕಿಸಿದ್ದೇನು! ಅಂತೂ ಕೊನೆಗೂ ಆದದ್ದೇನು? ಪ್ರಧಾನಿಗಳು ಗಡ್ಡ ಬಿಟ್ಟಿದ್ದಷ್ಟೇ ಲಾಭ. ಗಡ್ಡ ಬಿಟ್ಟವರೆಲ್ಲರೂ ಬಂಗಾಳದ ಅಸ್ಮಿತೆ ರವೀಂದ್ರನಾಥ ಠ್ಯಾಗೋರ್ ಆಗುವುದಿಲ್ಲ ಎನ್ನುವ ಮಾತನ್ನು ಬೆಂಗಾಳಿಗಳು ಸರಿಯಾದ ಮಂಗಳಾರತಿ ಸಹಿತ ಆಡಿ ಕಳಿಸಿದ್ದಾರೆ.
ಮತ್ತೆ ಗದ್ದುಗೆ ಏರಲು ದೀದಿಗೆ ಬೇಕಿದ್ದ ಮ್ಯಾಜಿಕ್ ನಂಬರ್ 147, ಆದರೆ ಬಂಗಾಳದ ಅಸ್ಮಿತೆಯ ಟ್ಯಾಗ್ ಲೈನ್ ಅಡಿ ಮತದಾರರು ದೊರಕಿಸಿಕೊಟ್ಟಿದ್ದು 215. ಬಂಗಾಳದಲ್ಲಿ ಅಧಿಕಾರವನ್ನು ದಕ್ಕಿಸಿಕೊಂಡೇ ತೀರುತ್ತೇವೆ ಎಂದು ಶಪಥ ಮಾಡಿದ್ದ ಬಿಜೆಪಿ ೨೦೦ ಸ್ಥಾನಗಳನ್ನು ಗೆಲ್ಲುವ ಹುಕಿಯಲ್ಲಿತ್ತು. ಮಮತಾ ಆಪ್ತ ಸುವೇಂದು ಅಧಿಕಾರಿಯ ಸಹಿತ 79 ಟಿಎಂಸಿ ನಾಯಕರನ್ನು ರಾತ್ರೋ ರಾತ್ರಿ ಕೇಸರಿ ಶಾಲು ಹಾಕಿ ಬಿಜೆಪಿಗೆ ಬರಮಾಡಿಕೊಳ್ಳಲಾಯಿತು. ತೆರೆಮರೆಯಲ್ಲಿ ಇಷ್ಟೆಲ್ಲಾ ಷಡ್ಯಂತ್ರಗಳನ್ನು ನಡೆಸಿ, ಬಹಿರಂಗವಾಗಿ ಮಮತಾರನ್ನು ವಾಚಾಮಗೋಚರ ನಿಂದಿಸಿ, ಹಿಂದೂಗಳು ಅಪಾಯದಲ್ಲಿದ್ದಾರೆ, ದೀದಿ ಜಿಹಾದಿ, ಮತಾಂತರಿಗಳ ಪರ ಎಂದೆಲ್ಲಾ ಅಪಪ್ರಚಾರ ನಡೆಸಿದರೂ ಕಮಲನಾಯಕರ ಬುಟ್ಟಿಗೆ ಬಿದ್ದಿದ್ದು ಕೇವಲ ೭೫ ಸ್ಥಾನ. ಅವೂ ಸಹ ತೃಣಮೂಲ ಕಾಂಗ್ರೆಸ್ ನಿಂದ ಬಿಜೆಪಿಗೆ ಆಪರೇಷನ್ ಕಮಲದ ಮೂಲಕ ಪಕ್ಷಾಂತರ ಮಾಡಿ ಚುನಾವಣೆ ನಿಂತು ಗೆದ್ದ (ಕುದುರೆಗಳಲ್ಲ) ಕುರಿಗಳು ಅಷ್ಟೆ. ದೀದಿಯ ಸೋಲಿಗೆ ಖೆಡ್ಡಾ ತೋಡಿ ಕುದುರೆ ವ್ಯಾಪಾರ ಮಾಡಿ, ಹಣದ ಹೊಳೆಯನ್ನೇ ಹರಿಸಿ, ಕ್ಷುಲ್ಲಕ ಕಾರಣಕ್ಕೆ ರಕ್ತದ ಕೋಡಿ ಹರಿಸಿ, ಇಲ್ಲಸಲ್ಲದ ತಲೆಬುಡವಿಲ್ಲದ ಕಪೋಲಕಲ್ಪಿತ ಸುಳ್ಳು ಅಪಪ್ರಚಾರಗಳನ್ನೇ ಚುನಾವಣಾ ಪ್ರಚಾರಭಾಷಣವನ್ನಾಗಿಸಿ ಏನೆಲ್ಲಾ ಸರ್ಕಸ್ ಮಾಡಿದರೂ ಕನಿಷ್ಟ 100ರ ಗಡಿ ದಾಟಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಎದುರಲ್ಲಿದ್ದಿದ್ದು ಬೆಂಗಾಳಿ ಕಾಳಿ.
ಒಂದು ಕಡೆ ಭವಿಷ್ಯದಲ್ಲಿ ಪಶ್ಚಿಮ ಬಂಗಾಳದಲ್ಲಿಯೂ ಬಿಜೆಪಿ ಸದೃಢವಾಗಿ ಎದ್ದು ನಿಲ್ಲಲಿದೆ ಎಂಬ ಸೂಚನೆಯನ್ನೂ, ತೃತೀಯ ರಂಗಕ್ಕೆ ಪ್ರಧಾನಿ ಅಭ್ಯರ್ಥಿ ಮಮತಾ ಫಿಕ್ಸ್ ಎಂಬ ಆಯಾಮವನ್ನು ನಿಕ್ಕಿ ಮಾಡಿದೆ ಬಂಗಾಳದ ಫಲಿತಾಂಶ. ಇಲ್ಲಿ ಸೋತಿದ್ದು ಬಿಜೆಪಿ ಆದರೆ ಸತ್ತಿದ್ದು ಮಾತ್ರ ಕಾಂಗ್ರೆಸ್ ಮತ್ತು ಎಡರಂಗ. ಪಶ್ಚಿಮ ಬಂಗಾಳದಲ್ಲಿ ಶತಾಯಗತಾಯ ಮಮತಾ ಬ್ಯಾನರ್ಜಿಯನ್ನು ಸೋಲಿಸಲೇಬೇಕು ಎಂದು ಪ್ರಧಾನಿಗಳ ಸಹಿತ ಗೃಹ ಸಚಿವ ಸೋ ಕಾಲ್ಡ್ ಚುನಾವಣಾ ಚಾಣಾಕ್ಯ ಅಮಿತ್ ಶಾ, ರಾಜನಾಥ್ ಸಿಂಗ್, ಯುಪಿಯ ಯೋಗಿ ಆದಿತ್ಯನಾಥ್, ಕಮಲ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಮುಂತಾಗಿ ಕೇಂದ್ರದ ಹಲವು ಪ್ರಭಾವಿ ನಾಯಕರು, ಕೇಂದ್ರ ಸರ್ಕಾರದ ಮಂತ್ರಿಗಳು 300 ಬಹಿರಂಗ ಪ್ರಚಾರ ಸಭೆಗಳನ್ನು ನಡೆಸಿದರು. ಎರಡು ರೂಪಾಯಿ ಗಿರಾಕಿಗಳಾದ ಭಕ್ತ ಗಣಗಳು ತಾವೇನೂ ಕಡಿಮೆ ಇಲ್ಲವೆಂದು, ಮಮತಾ ತೇಜೋವಧೆಯ ಅಳಿಲು ಸೇವೆಗೆ ಟೊಂಕಕಟ್ಟಿ ನಿಂತರು. ಖುದ್ದು ಪ್ರಧಾನಿಗಳೇ 20ಕ್ಕೂ ಹೆಚ್ಚು ಬೃಹತ್ ರ್ಯಾಲಿಯಲ್ಲಿ ಮಾತಾಡಿದರು. ಬರೋಬ್ಬರಿ 160 ರೋಡ್ ಶೋಗಳನ್ನು ಬಿಜೆಪಿ ನಡೆಸಿತು. 200 ಸ್ಥಾನ ಗೆದ್ದೇ ತೀರುತ್ತೀವಿ ಎಂದು ಆತ್ಮವಿಶ್ವಾಸದಲ್ಲಿ ಬೀಗುತ್ತಿತ್ತು ಬಿಜೆಪಿ.
ಇಲ್ಲಿ ಸಮೀಕ್ಷೆಗೂ ಪೂರ್ವದಲ್ಲಿ ಆದ ಕೆಲವು ವಿದ್ಯಮಾನಗಳನ್ನು ಗಮನಿಸೋಣ. ದೀದೀ ಪರ ರಣತಂತ್ರ ರೂಪಿಸಿದ್ದ ಚುನಾವಣಾ ಚಾಣಾಕ್ಯ ಪ್ರಶಾಂತ್ ಕಿಶೋರ್, ಬಿಜೆಪಿ 100 ಸ್ಥಾನ ದಾಟಿದರೇ (ಎರಡಂಕಿ ಮೊತ್ತದಿಂದ ಮೂರಂಕಿ ತಲುಪಿದರೆ) ತಾನು ಈ ವೃತ್ತಿಯನ್ನೇ ಬಿಟ್ಟು ಬಿಡುವುದಾಗಿ ಹೇಳಿದ್ದರು. ಮಮತಾ ಬ್ಯಾನರ್ಜಿಯ ಅತ್ಯಂತ ಆಪ್ತ ಸುವೇಂದು ಅಧಿಕಾರಿ, ತಾನು ದೀದಿಯನ್ನು ನಂದೀಪುರ ಲೋಕಸಭೆಯಲ್ಲಿ 50 ಸಾವಿರದಷ್ಟು ಅಂತರದಿಂದ ಸೋಲಿಸುತ್ತೇನೆ, ಇಲ್ಲವೇ ರಾಜಕೀಯ ತೊರೆಯುತ್ತೇನೆ ಎಂದು ಬಹಿರಂಗವಾಗಿ ಘೋಷಿಸಿದ್ದರು. ಅಮಿತ್ ಶಾ ತನ್ನ ಪ್ರಚಾರ ಸಭೆಯಲ್ಲಿ ಗುರುದೇವ ರವೀಂದ್ರನಾಥ ಠ್ಯಾಗೋರ್ ಜನ್ಮಸ್ಥಾನ ಶಾಂತಿನಿಕೇತನ ಎಂದು ತಪ್ಪಾಗಿ ಹೇಳಿ ವಿವಾದಕ್ಕೆ ಗುರಿಯಾದರು. ಯಾವಾಗ ಸುವೇಂದು ವಿಶ್ವಾಸದ್ರೋಹವೆಸಗಿದರೋ ಆಗಲೇ ದೀದಿ ತನ್ನ ಭವಾನಿಪುರ ಕ್ಷೇತ್ರವನ್ನು ಚಟ್ಟೋಪಾಧ್ಯಾಯ ಅವರಿಗೆ ಬಿಟ್ಟುಕೊಟ್ಟು, ಹಠ ತೊಟ್ಟು ನಂದಿಗ್ರಾಮವನ್ನೇ ತನ್ನ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡರು. ಕಾರಣ ದೀದಿಯಲ್ಲಿದ್ದ ಹಠಮಾರಿತನ ಮತ್ತು ಜಿದ್ದು. ತನ್ನ ವಿಶ್ವಾಸಕ್ಕೆ ಧಕ್ಕೆ ಮಾಡಿದ ಸುವೇಂದು ಅಧಿಕಾರಿಯನ್ನು ರಾಜಕೀಯವಾಗಿ ಮುಗಿಸದೇ ಬಿಡಲಾರೆ ಎನ್ನುವ ಛಲ ದೀದಿಯಲ್ಲಿ ಕಂಡುಬಂತು. ನೆನಪಿರಲಿ ಸುವೇಂದು ಅಧಿಕಾರಿಯ ತಂದೆಯ ಕಾಲದಿಂದಲೂ ನಂದಿಗ್ರಾಮ ಅವರ ಕುಟುಂಬದ್ದೇ ಜಾಗೀರು. ನಮ್ಮ ಸಿದ್ದರಾಮಯ್ಯನವರೇ ವರುಣಾದಲ್ಲಿ ಸೋಲುವ ಭಯ ಕಾಡಿದಾಗ ಬಾದಾಮಿಯನ್ನೂ ಆಯ್ಕೆ ಮಾಡಿಕೊಂಡು ಎರಡು ಕಡೆ ಚುನಾವಣೆ ಸ್ಪರ್ಧಿಸಿದರು. ನರೇಂದ್ರ ಮೋದಿಯವರೂ ಈ ಹಿಂದಿನ ಚುನಾವಣೆಯಲ್ಲಿ ಎರಡು ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ ದೀದಿ ಮಾತ್ರ ಸೋಲುವ ನಿರೀಕ್ಷೆ ಇದ್ದರೂ ನಂದಿಗ್ರಾಮದಲ್ಲೇ ಚಂಡಿ ಹಿಡಿದು ಕೂತುಬಿಟ್ಟರು. ಹೀಗೆ ಹಿಡಿದ ಹಠ ಸಾಧಿಸಿಯೇ ತೀರುವ ಜಿದ್ದು ಮಮತಾ ದೀದಿಯ ಪ್ರಭೆಯನ್ನು ಉಜ್ವಲಗೊಳಿಸಿದೆ. ಇಂತದ್ದೊಂದು ಜಿದ್ದು ಇಂದಿರಾ ಪ್ರಿಯದರ್ಶಿನಿಯಲ್ಲಿತ್ತು.
ಈ ಚುನಾವಣೆಯಿಂದ ಸಾಬೀತಾದ ಒಂದು ಮಹತ್ವದ ಅಂಶ ಬಂಗಾಳದ ಅಸ್ಮಿತೆಯನ್ನು ಗೌರವಿಸದ ಹೊರಗಿನ ಯಾವ ಬಲಾಢ್ಯ ಶಕ್ತಿಗಳನ್ನೂ ಬೆಂಗಾಲಿಗಳು ಒಪ್ಪಿಕೊಳ್ಳುವುದಿಲ್ಲ. ಬೆಂಗಾಲಿಗಳು ಕೋಮುಭಾವನೆಗಳನ್ನು ಕೆಣಕುವ ಪಕ್ಷವನ್ನು ಸ್ವೀಕರಿಸುವುದಿಲ್ಲ. ಇಲ್ಲಿನ ಬೆಂಗಾಲಿ ಹಿಂದೂ ಎಂದರೆ ಅವನು ಮುಸಲ್ಮಾನರ ಹೋಟೆಲ್ಲಿನಲ್ಲಿ ಬಿರಿಯಾನಿ ತಿಂದು ಉಭಯಕುಶಲ ಮಾತಾಡಿ ಬರುವ ಶುದ್ಧ ಸೆಕ್ಯೂಲರ್. ಇಲ್ಲಿ ಪಾಕಿಸ್ತಾನ, ಭಯೋತ್ಪಾದನೆ, ಹಿಂದೂಗಳ ರಕ್ಷಣೆ, ಹಿಂದೂ ರಾಷ್ಟ್ರ ನಿರ್ಮಾಣ ಮುಂತಾದ ಸವಕಳಿಯಾದ ಸ್ಲೋಗನ್‌ಗಳ ತೌಡು ಕುಟ್ಟಿದರೆ ನಡೆಯುವುದಿಲ್ಲ. ಇಲ್ಲಿ ಭ್ರಮಾತ್ಮಕ ಸುಳ್ಳುಗಳು ನಾಟಕಕ್ಕೆ ಅಸಲು ಜಾಗವಿಲ್ಲ. ಈ ಚುನಾವಣಾ ಫಲಿತಾಂಶ ತೃತೀಯ ರಂಗ ಬಲವರ್ಧನೆಗೆ ಒಂದು ಮಹತ್ವದ ಮೈಲಿಗಲ್ಲಾಗಬಹುದು ಮತ್ತು ದೀದಿಯ ಪ್ರಧಾನಮಂತ್ರಿ ಉಮೇದುವಾರಿಕೆ ಪಕ್ಕಾ ಆಗಿದೆ. ಇಡೀ ಕೇಂದ್ರ ಸರ್ಕಾರ ತನ್ನೆಲ್ಲಾ ಅಸ್ತ್ರ ಶಸ್ತ್ರಗಳನ್ನು ಪ್ರಯೋಗಿಸಿದರೂ ದೀದಿಯನ್ನು ಸೋಲಿಸಲು ಸಾಧ್ಯವಾಗಲಿಲ್ಲ ಎಂದರೆ ಭವಿಷ್ಯದಲ್ಲಿ ಮೋದಿಗೆ ಪ್ರಬಲ ವಿರೋಧಿಯಾಗಿ ನಿಲ್ಲುವ ಸೂಚನೆಯನ್ನು ದೀದಿ ನೀಡಿದ್ದಾರೆ. ಕಾಂಗ್ರೆಸ್ ತನ್ನ ಎಂದಿನ ನೀರಸ ವೈಫಲ್ಯ ತೋರಿ ತನ್ನ ಅವನತಿಯ ದಾರಿ ನಿಶ್ಚಿತಗೊಳಿಸಿಕೊಂಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಕನಿಷ್ಟ ವಿರೋಧ ಪಕ್ಷದಲ್ಲಾದರೂ ಇದ್ದವು. ಈ ಬಾರಿ ಎಡಪಕ್ಷಗಳು ದೀದಿಯನ್ನು ಸೋಲಿಸಲು ತನ್ನ ಸೈದ್ಧಾಂತಿಕ ವಿಚಾರಧಾರೆಗೆ ಅಪಮಾನ ಎಸಗುವಂತಹ ಅತ್ಯಂತ ಹೇಯವಾದ ರಾಜಕಾರಣ ಮಾಡಿದವು. ತೆರೆಮರೆಯಲ್ಲಿ ಬಿಜೆಪಿಗೆ ಬೆಂಬಲಿಸಿದ ಎಡರಂಗ ತನ್ನ ಚಟ್ಟವನ್ನು ತಾನೇ ಹೊತ್ತುಕೊಳ್ಳುವ ಹಂತ ಮುಟ್ಟಿದೆ.
ತಮಿಳುನಾಡು ವಿಧಾನಸಭೆ ಒಟ್ಟು 234 ಸದಸ್ಯ ಬಲದ ವಿಧಾನಸಭೆಯಲ್ಲಿ ಮತ್ತೆ ಸೂರ್ಯ ಉದಯಿಸಿದ್ದಾನೆ. ಕರುಣಾನಿಧಿ ಪುತ್ರ ಸ್ಟಾಲಿನ್ ಮುಖ್ಯಮಂತ್ರಿ ಹುದ್ದೆಗೇರುವುದಕ್ಕೆ ಮಹೂರ್ತ ನಿಗದಿಯಾಗಿದೆ. ಜಯಲಲಿತಾ ಎರಾ ಅಂತ್ಯ, ಶಶಿಕಲಾ ನಟರಾಜನ್ ರಾಜಕೀಯ ಸಂನ್ಯಾಸ ಈ ಚುನಾವಣೆಯಲ್ಲಿ ಮಹತ್ತರ ಪಾತ್ರ ವಹಿಸಿದವು. ಪಳನಿಸ್ವಾಮಿ ಮತ್ತು ಪನೀರು ಸೆಲ್ವಂ ಎಂಬ ಆಟದ ಕುದುರೆಗಳ ಕರಾಮತ್ತು ತಮಿಳರ ನಾಡಿನಲ್ಲಿ ನಡೆಯಲಿಲ್ಲ. ಇನ್ನೊಬ್ಬ ಕರುಣಾ ಪುತ್ರ ಅಳಗಿರಿಯ ಬಂಡಾಯವೂ ಸ್ಟಾಲಿನ್ ಕುದುರೆಯನ್ನು ತಡೆದು ನಿಲ್ಲಿಸಲಿಲ್ಲ. ಇನ್ನೊಂದು ಮುಖ್ಯ ವಿಚಾರವೆಂದರೆ ತಮಿಳರ ದ್ರಾವಿಡ ಅಸ್ಮಿತೆ ಉತ್ತರ ಭಾರತದ ಮಾರವಾಡಿಗಳಿಗೆ ತಮ್ಮನ್ನು ತಾವು ಅಡವಿಡಲು ಸಿದ್ಧವಿಲ್ಲ ಎಂಬುದನ್ನು ಪ್ರೂವ್ ಮಾಡಿವೆ. ಹೀಗಾಗಿಯೇ ಎನ್.ಡಿ.ಎ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೂ ಸಹ ಎಐಡಿಎಂಕೆ ಹೀನಾಯವಾಗಿ ಸೋಲಲು ಕಾರಣವಾಯಿತು. ತಮಿಳುನಾಡಿನಲ್ಲಿ ಸರಳ ಬಹುಮತಕ್ಕೆ ಅಗತ್ಯವಾಗಿದ್ದು 118 ಸ್ಥಾನಗಳು ಆದರೆ ಡಿಎಂಕೆ ಬಲೆಗೆ ಬಿದ್ದಿದ್ದು ಬರೋಬ್ಬರಿ 160 ಕ್ಷೇತ್ರಗಳು. ಕಳೆದ ಬಾರಿಗಿಂತ 60 ಸ್ಥಾನ ಕಳೆದುಕೊಂಡ ಎಐಡಿಎಂಕೆ ಕೇವಲ 64 ಸ್ಥಾನಗಳಿಗೆ ತೃಪ್ತಿ ಪಡಬೇಕಾಯಿತು. ಎಐಡಿಎಂಕೆಯ ಧರ್ಮ ತಂಗವೇಲ್, ಎಂಎಂಎಂಕೆಯ ಟಿಟಿವಿ ದಿನಕರನ್, ಮಕ್ಕಳ್ ನೀದಿ ಮಯ್ಯಂ ಎಂಬ ಪಕ್ಷ ಸ್ಥಾಪಿಸಿ ಕೊಯಮತ್ತೂರಿನಿಂದ ಕಣಕ್ಕಿಳಿದ ಕಮಲ್ ಹಸನ್ ಸ್ಟಾಲಿನ್ ಅಬ್ಬರದಲ್ಲಿ ಕಳೆದುಹೋಗಿದ್ದಾರೆ.
ಕೇರಳದಲ್ಲಿ ಈ ಹಿಂದಿನ ಚುನಾವಣೆ ಇತಿಹಾಸ ಗಮನಿಸಿದರೆ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಯೂನಿಯನ್ ಡೆಮಾಕ್ರಟಿಕ್ ಫ್ರಂಟ್ ಎರಡೂ ಸರದಿಯ ಪ್ರಕಾರ ಆಡಳಿತ ನಡೆಸುತ್ತಿದ್ದವು. ಆದರೆ ಈ ಬಾರಿ ಯೂನಿಯನ್ ಫ್ರಂಟ್ ನ ನಾಯಕರ ಒಳಜಗಳಗಳು ಲೆಫ್ಟ್ ಗೆ ಲಾಭ ತಂದಿಟ್ಟಿತು. ಕೇರಳದಲ್ಲಿ ಎಲ್.ಡಿ.ಎಫ್ ನ ಜಯ ಪಿಣರಾಯಿ ವಿಜಯನ್ ರ ವ್ಯಕ್ತಿಗತ ಗೆಲುವೇ ಹೊರತು ಎಡಪಕ್ಷದಲ್ಲ. 2018ರ ನಿಫಾ ವೈರಸ್ ಮತ್ತು 2020ರ ಕರೋನಾ ವೈರಸ್ ಕಾಲದಲ್ಲಿ ಕೇರಳವನ್ನು ಅಪಾಯದಿಂದ ಪಾರು ಮಾಡಲು ಕಾರಣವಾಗಿದ್ದೂ, ಕೇರಳ ಕಾಲಿಂಗ್ ಟೂರಿಸಂ ಕ್ಷೇತ್ರಗಳ ಅಭಿವೃದ್ಧಿ ಮುಂತಾದ ದೂರದೃಷ್ಟಿಯ ಯೋಜನೆಗಳು, ಚಂಡಮಾರುತ ಅಬ್ಬರಿಸಿದಾಗ ಫೀಲ್ಡ್ ನಲ್ಲಿ ನಿಂತು ಸಂತ್ರಸ್ತರರ ರಕ್ಷಣೆ, ಕೇರಳ ಮರುನಿರ್ಮಾಣದ ಬದ್ಧತೆ ಮುಂತಾದ ಹತ್ತು ಹಲವು ಸಂಗತಿಗಳಿಂದಾಗಿ ಈ ಚುನಾವಣೆಯಲ್ಲಿ ಕೇರಳಿಯನ್ನರು ಪಕ್ಷವನ್ನಲ್ಲದೇ ವ್ಯಕ್ತಿಯನ್ನು ನೋಡಿ ಮತ ನೀಡಿದ್ದಾರೆ. ಅದರ ಪರಿಣಾಮವೇ ಈ ಬಾರಿ ಯೂನಿಯನ್ ಡೆಮಾಕ್ರಟಿಕ್ ಫ್ರಂಟ್ ನ ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಸಾಂಪ್ರದಾಯಿಕ ಮತಬ್ಯಾಂಕ್ ಪಿಣರಾಯಿ ಪಾಲಾಗಿದೆ. 140 ವಿಧಾನಸಭಾ ಕ್ಷೇತ್ರ ಬಲದ ಕೇರಳದಲ್ಲಿ 99 ಸ್ಥಾನ ಪಡೆದು ಪಿಣರಾಯಿ ಎರಡನೇ ಟರ್ಮ್ ಗೆ ಮುಂದುವರೆದಿದ್ದರೇ, ಯೂಟಿಎಫ್ ಕಳೆದ ಬಾರಿಗಿಂತ 6 ಸ್ಥಾನ ಕಳೆದುಕೊಂಡು 41ಕ್ಕೆ ಕುಸಿದಿದೆ.
ಅಸ್ಸಾಂ ನ ಚಹಾತೋಟದಲ್ಲಿ ಬಾರಿಯೂ ಸರ್ಬಾನಂದ ಸೋನಾವಾಲರ ಕೇಸರಿ ಪತಾಕೆ ಪಟಪಟಿಸುತ್ತದೆ ಎನ್ನುವ ನಿರೀಕ್ಷೆ ನಿಜವಾಗಿದೆ. ಇಲ್ಲಿ ಮೋದಿ ಮ್ಯಾಜಿಕ್ ಗಿಂತ ಕೆಲಸ ಮಾಡಿದ್ದು ಸೋನಾವಾಲರ ಕೆಲಸವಷ್ಟೆ. ಇನ್ನು ಪುದುಚೆರಿಯಲ್ಲಿ ಎನ್ ಡಿ ಎ ಖಾತೆ ತೆರೆದು ದಕ್ಷಿಣ ಭಾರತದಲ್ಲಿ ಎರಡನೇ ರಾಜ್ಯದಲ್ಲಿ ಅಧಿಕಾರ ಗ್ರಹಣ ಮಾಡಿದ್ದರೇ, ಇಲ್ಲಿಯೂ ಎಐಡಿಎಂಕೆ ಪ್ರಭಾವ ಮತ್ತು ಮಾಜಿ ಮುಖ್ಯಮಂತ್ರಿ ಎನ್ ರಂಗಸ್ವಾಮಿಯ ಚಾರ್ಮ್ ಮತ್ತು ಕಾಂಗ್ರೆಸ್ ನ ವಿ ನಾರಾಯಣ ಸ್ವಾಮಿಯ ಆಂತರಿಕ ಬಂಡಾಯದ ಕಾರಣವೇ ಹೊರತು ಮೋದಿ ಮೇನಿಯಾ ಅಲ್ಲ. 30 ಸ್ಥಾನಬಲದ ಪುದುಚೆರಿಯಲ್ಲಿ ಸರಳಬಹುಮತಕ್ಕೆ ಬೇಕಿದ್ದ 16 ಸ್ಥಾನ ಎನ್.ಡಿ.ಎ ಪಾಲಾಗಿದೆ. ಯೂಪಿಎ ಮೈತ್ರಿಕೂಟ 9 ಕ್ಕೆ ಮತ್ತು ಇತರರು 5 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಈ ಚುನಾವಣೆಗಳಿಂದ ಮೋದಿಯ ಅಲೆ ಕುಸಿಯುತ್ತಿರುವ ಸೂಚನೆ ಒಂದು ಕಡೆಯಾದರೇ ಇನ್ನೊಂದು ಕಡೆ ಕಾಂಗ್ರೆಸ್ ಕೊನೆಯುಸಿರೆಳೆಯುತ್ತಿರುವ ಸ್ಪಷ್ಟ ಚಿತ್ರಣ ಸಿಗುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಮೋದಿಯ ಬಿಜೆಪಿ ವಿರುದ್ಧ ತೊಡೆ ತಟ್ಟಿ ನಿಲ್ಲುವ ಸಾಮರ್ಥ್ಯ ತೃತೀಯ ರಂಗದ ದೀದಿಗೆ ಇದೆಯೇ ಹೊರತು ಕಾಂಗ್ರೆಸ್ ಗೆ ಅಲ್ಲ.
ಲಾಸ್ಟ್ ಸಿಪ್: ಆನ್ ಸೀರಿಯಸ್ ನೋಟ್, ಬಡಾಯಿ ಭಾಷಣಗಳಿಂದ ದೇಶ ನಡೆಸೋಕ್ಕಾಗಲ್ಲ. ಸುಳ್ಳುಗಳ ಭ್ರಮಾಪ್ರಪಂಚ ನಿರ್ಮಿಸಿ ಹೆಚ್ಚು ದಿನ ಆಳೋಕ್ಕಾಗಲ್ಲ. ಎಂಡ್ ಆಫ್ ಮೈ ಶೋ ನಾನು ಹೇಳೋದಿಷ್ಟು, ಈ ದೇಶದಲ್ಲಿ ಭವಿಷ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊರತಾಗಿ ತೃತೀಯ ರಂಗ ತನ್ನ ಅಸ್ಥಿತ್ವ ಉಳಿಸಿಕೊಳ್ಳಲಿದೆ. ಕಾಂಗ್ರೆಸ್ ಶವಪೆಟ್ಟಿಗೆ ಸಿದ್ಧವಾಗಿದೆ. ಕಟ್ಟ ಕಡೆಯ ಮೊಳೆಯನ್ನು ಯಾರು ಹೊಡಿತಾರೆ ಅನ್ನೋದಷ್ಟೇ ಕಾದು ನೋಡಬೇಕಿರುವ ವಿಚಾರ.
ಹಾಗಂತ ಮಮತಾ ದೀದಿಯ ಸರ್ವಾಧಿಕಾರಿ ವರ್ತನೆ ನಿಯಂತ್ರಣಕ್ಕೆ ಬರದಿದ್ದರೇ ಭವಿಷ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸೂಚನೆ ಇಲ್ಲದಿಲ್ಲ. ನಾವು ಇಂದಿರಾ ಗಾಂಧಿಯ ಜಿದ್ದನ್ನು ಕೇಳಿಯಷ್ಟೆ ಬಲ್ಲೆವು ಆದರೆ ಮಮತಾ ಬ್ಯಾನರ್ಜಿ ಎನ್ನುವ ಹೆಂಗಸು ಇಂದಿರಾ ಪ್ರಿಯದರ್ಶಿನಿಯವರನ್ನು ಮೀರಿಸಬಲ್ಲ ಸರ್ವಾಧಿಕಾರಿಯಾಗಬಲ್ಲಳು. ಮೋದಿ ಬರುವ ಮೊದಲೂ ಒಬ್ಬ ಆಟೋಕ್ರಾಟ್ ಈ ದೇಶಕ್ಕೆ ಬೇಕು ಎನ್ನುವ ಮಾತುಗಳಿದ್ದವು. ಮಮತಾ ಮೋದಿಯನ್ನು ಮೀರಿಸುವ ಡಿಕ್ಟೇಟರ್ ಆಗಬಹುದು. ಆದರೆ ಆ ಸರ್ವಾಧಿಕಾರಿ ಧೋರಣೆ ದೇಶದ ಪಾಲಿಗೆ ಎಷ್ಟು ಪೂರಕ ಎಷ್ಟು ಮಾರಕ ಅನ್ನುವುದು ಮಾತ್ರ ಕಾಲವೇ ನಿರ್ಧರಿಸಬೇಕು.
ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಗುಂಪುಗಾರಿಕೆ, ಅತಿಯಾದ ನೆಹರೂ ಕುಟುಂಬ ನಿಷ್ಠೆಯೇ ಕಾಂಗ್ರೆಸ್ ನ ಇವತ್ತಿನ ದುರವಸ್ಥೆಗೆ ಕಾರಣ. ಬಿಜೆಪಿಗೆ ಮುಂದಿನ ದಿನಗಳಲ್ಲಿ ಅದಕ್ಕಿಂತಲೂ ಹೀನಾಯವಾದ ಸ್ಥಿತಿ ಬರಬಹುದು. ಇನ್ನಾದರೂ ಜಾತಿಗಳನ್ನು ಧರ್ಮಗಳನ್ನು ಒಡೆದು, ಸಮಾಜದಲ್ಲಿ ವಿಷ ಬಿತ್ತಿ, ಬೆಂಕಿ ಹಚ್ಚಿ ಹೆಣದ ಮೇಲೆ ರಾಜಕೀಯ ಮಾಡುವುದನ್ನು ಎರಡೂ ಪಕ್ಷಗಳು ನಿಲ್ಲಿಸದೇ ಇದ್ದರೇ ಈ ಎರಡೂ ರಾಷ್ಟ್ರೀಯ ಪಕ್ಷಗಳ ಅವನತಿ ನಿಶ್ಚಿತ. ಪಿಚ್ಚರ್ ಅಭಿ ಬಾಕೀ ಹೈ ಪ್ಯಾರೇ ಭಕ್ತೋ!!!
***
“ಅಸಲು ಚುನಾವಣಾ ಚಾಣಾಕ್ಯ ಪ್ರಶಾಂತ್ ಕಿಶೋರ್ ನಿವೃತ್ತಿ! ರಾಜಕೀಯ ರಂಗಕ್ಕೆ ಧುಮುಕಲಿದ್ದಾರಾ ತಂತ್ರಗಾರ?ʼ
ಮಮತಾ ದೀದಿ ಮತ್ತು ಡಿಎಂಕೆಯ ಸ್ಟಾಲಿನ್ ಹಿಂದೆ ನಿಂತು ರಾಜಕೀಯ ತಂತ್ರಗಾರಿಗೆ ರೂಪಿಸಿದ ರಾಜಕಾರಣದ ಅಸಲಿ ಚಾಣಾಕ್ಯ ಪ್ರಶಾಂತ್ ಕಿಶೋರ್ ಪೊಲಿಟಿಕಲ್ ಸ್ಟ್ರಾಟೆಜಿ ಕ್ಷೇತ್ರದಿಂದ (ಸಕ್ರಿಯ ರಾಜಕಾರಣದಲ್ಲಿ ಇಂತದ್ದೊಂದು ವಿಭಿನ್ನ ಆಯಾಮವನ್ನು ಹುಟ್ಟುಹಾಕಿದವರೇ ಪ್ರಶಾಂತ್) ವಿಮುಖರಾಗ್ತಿದ್ದಾರೆ. ಎರಡೆರಡು ಭರ್ಜರಿ ಯಶಸ್ಸಿನ ನಂತರ ಇಂತದ್ದೊಂದು ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ. ನಿಮಗೆಲ್ಲಾ ಗೊತ್ತಿದೆಯೋ ಇಲ್ಲವೋ 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿಯವರನ್ನು ಸೂಚಿಸಲು ಕಾರಣವಾಗಿದ್ದೇ ಪ್ರಶಾಂತ್ ಕಿಶೋರ್ ಸ್ಟ್ರಾಟೆಜಿ. ʼಅಬ್ ಕಿ ಬಾರ್ ಮೋದಿ ಸರ್ಕಾರ್ʼ ಮತ್ತು ʼಅಚ್ಚೇ ದಿನ್ ಆಯೇಗಾʼ ಈ ಎರಡೂ ಜನಪ್ರಿಯ ಸ್ಲೋಗನ್ ಗಳೂ ಬಿಜೆಪಿ ಅಧಿಕೃತ ಸ್ಲೋಗನ್ ಗಳಾಗಿರಲಿಲ್ಲ. ಬದಲಿಗೆ ಅದನ್ನು ಜನಪ್ರಿಯಗೊಳಿಸಿದ್ದು ಪ್ರಶಾಂತ್ ಕಿಶೋರ್ ಎಂಡ್ ಟೀಮ್. ಆ ಚುನಾವಣೆಯಲ್ಲಿ ಮೋದಿಯಿಸಂ, ಮೋದಿ ಮೇನಿಯಾ, ನಮೋಗಿರಿ ಇತ್ಯಾದಿಗಳೇನೇನಾದವೂ ಅದೆಲ್ಲವೂ ಪ್ರಶಾಂತ್ ಕಿಶೋರ್ ರೂಪಿಸಿದ ತಂತ್ರಗಾರಿಗೆ. ಇಡೀ ದೇಶವನ್ನು ಮಾಸ್ ಮ್ಯಾಸ್ಮರೈಸ್ ಮಾಡಿದ್ದು ಮೋದಿಯಲ್ಲ, ಮೋದಿಯೆಂಬ ಬ್ರಾಂಡ್ ಕ್ರಿಯೇಟ್ ಮಾಡಿದ್ದ ಪಕ್ಕಾ ಮಾರ್ಕೆಟಿಂಗ್ ಎಕ್ಸ್ ಪರ್ಟ್ ಪಿಕೆ. ಅದಾದ ನಂತರ ಎನ್.ಡಿ.ಎ ನಿಂದ ಹೊರಬಂದ ಪಿಕೆ ದೆಹಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರೀವಾಲ್ ಕ್ಯಾಂಪೇನಿಂಗ್ ಉಸ್ತುವಾರಿ ಹೊತ್ತರು, ಅತ್ತ ಬಿಹಾರ ಚುನಾವಣೆಯಲ್ಲಿ ಜೆಡಿಯೂನ ನಿತೀಶ್ ಪರ ಸ್ಟ್ರಾಟೆಜಿ ರೂಪಿಸಿದರು. ಈ ಚುನಾವಣೆಯಲ್ಲೂ ಡಿಎಂಕೆಯ ಸ್ಟಾಲಿನ್ ಮತ್ತು ಬೆಂಗಾಳದ ದೀದಿ ಬೆನ್ನಿಗೆ ನಿಂತು ಗೆಲ್ಲಿಸಿ ಕರೆತಂದರು. ಈಗ ದೇಶಕ್ಕೆ ದೇಶವೇ ಅಚ್ಚರಿ ಪಡುವಂತೆ ಪಿಕೆ ತನ್ನ ಕ್ಷೇತ್ರದಿಂದ ಹಿಂದೆ ಸರಿದಿದ್ದಾರೆ. ಇದರ ಹಿಂದೆ ಪಿಕೆಯ ರಾಜಕಾರಣ ರಂಗಪ್ರವೇಶದ ಮುನ್ಸೂಚನೆಗಳು ಕಾಣುತ್ತಿವೆ. ಪ್ರಶಾಂತ್ ಯಾವ ಪಕ್ಷದಿಂದ ರಣವೀಳ್ಯ ಸ್ವೀಕರಿಸುತ್ತಾರೆ? ಭವಿಷ್ಯದಲ್ಲಿ ಹೊಸ ಪಕ್ಷ ಕಟ್ಟಲಿದ್ದಾರಾ? ಅಥವಾ ತೃತೀಯ ರಂಗದ ಒಗ್ಗೂಡಿವಿಕೆಗೆ ವೇದಿಕೆ ಕಟ್ಟಲಿದ್ದಾರಾ? ಮುಂತಾದ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ಭಾರತದ ಅಸಲಿ ಚುನಾವಣಾ ತಂತ್ರಗಾರ, ದಿ ರಿಯಲ್ ಚಾಣಾಕ್ಯ ಪಿಕೆ ಅಲಿಯಾಸ್ ಪ್ರಶಾಂತ್ ಕಿಶೋರ್ ರೂಪಿಸಿದ ಕಾರ್ಯಕ್ರಮಗಳು ಮತ್ತು ಸ್ಲೋಗನ್ ಗಳು ಬೆಂಗಾಲ್ ಎಲೆಕ್ಷನ್ ನಲ್ಲಿ ಸಖತ್ತಾಗಿ ವರ್ಕೌಟ್ ಆಗಿದೆ. ಈ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ರೂಪಿಸಲ್ಪಟ್ಟ ಸ್ಲೋಗನ್ ಗಳು ‘ದೀದಿ ಕೇ ಬೋಲೋ’ (ನೇರವಾಗಿ ದೀದಿ ಗಮನಕ್ಕೆ ತನ್ನಿ ಎಂದು ಕಾರ್ಯಕರ್ತರಿಗೆ), ‘ದ್ವಾರೇ ಸರ್ಕಾರ್’ (ಮನೆ ಬಾಗಿಲಿಗೆ ಸರ್ಕಾರ), ‘ಬಾಂಗ್ಲಾರ್ ಗಾರ್ಬೋ ಮಮತಾ’ (ಬಂಗಾಳದ ಹೆಮ್ಮೆ ಮಮತಾ), ‘ಬಾಂಗ್ಲಾ ನಿಜೇರ್ ಮಯೇಕಿ ಚೆ’ (ಬಂಗಾಳದ ಮಗಳೇ ಬಂಗಾಳಕ್ಕೆ ಬೇಕು)
‘ಖೆಲಾ ಹೂಬೇ’ (ಆಟಕ್ಕೆ ಬನ್ನಿ) ಮುಂತಾದವು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟಿಗೆ ಟ್ರೆಂಡ್ ಹುಟ್ಟುಹಾಕಿದ್ದವು. ಯಾವಾಗ ಮೋ-ಷಾಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಆಕ್ರಮಣಕಾರಿಯಾದರೋ ಆಗಲೇ ಪಿಕೆ ತನ್ನ ತಂತ್ರಗಾರಿಯ ಮುಖವನ್ನೇ ಬದಲಾಯಿಸಿದರು. ಲೋಕಲ್ ವರ್ಸಸ್ ಔಟ್ ಸೈಡರ್ಸ್ ಅಥವಾ ಬಂಗಾಳದ ಅಸ್ಮಿತೆ ವರ್ಸಸ್ ಬಾಹ್ಯ ಶಕ್ತಿಗಳು ಎನ್ನುವುದಾಗಿ ಬದಲಾಯಿಸಿದರು. ಮೋ – ಷಾ ಗಳಿಗೆ ಪಿಕೆ ಅರ್ಥವಾಗಲಿಲ್ಲ ಆದರೆ ಪಿಕೆಗೆ ಮೋ – ಷಾ ಏನು ಎನ್ನುವುದು ಚೆನ್ನಾಗಿಯೇ ಗೊತ್ತಿತ್ತು. ಅದರ ಪರಿಣಾಮವೇ ಈ ಫಲಿತಾಂಶ.
“ಐ ಪ್ಯಾಕ್” ಸಂಸ್ಥೆ ಪಕ್ಕಾ ಚುನಾವಣಾ ರಣತಂತ್ರ ಹಣೆಯುವ ಡೊಮೈನ್. ಇಂತದ್ದೊಂದು ಹೊಸ ಕಾರ್ಯಕ್ಷೇತ್ರವನ್ನು ಭಾರತದಲ್ಲಿ ಹುಟ್ಟುಹಾಕಿದ ಹರಿಕಾರ ಪಿಕೆ. ಪಿಕೆ ಆಲೋಚನೆ, ದೂರದೃಷ್ಟಿ, ಸ್ಟ್ರಾಟೆಜಿ, ಟ್ಯಾಕ್ಟಿಕ್ಸ್ ಗುರಿ ತಪ್ಪಿದ ಇತಿಹಾಸವೇ ಇಲ್ಲ. ಪಿಕೆಯ ಶಿಷ್ಯ ರಜತ್ ಸೇಥಿ ಮತ್ತು ಶುಭ್ರಸ್ತ ದಂಪತಿಗಳೇ 2016ರ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಸರ್ಬಾನಂದ ಸೋನಾವಾಲ ನೇತೃತ್ವದಲ್ಲಿ ಬಿಜೆಪಿ ಅಧಿಕಾರ ಹಿಡಿಯುವಂತೆ ಯೋಜನೆ ರೂಪಿಸಿದವರು. ದೇಶಾದ್ಯಂತ ಈಗೇನು ಎಲ್ಲಾ ಪಕ್ಷಗಳ ವಾರ್ ರೂಮ್ ಮತ್ತು ಸೋಶಿಯಲ್ ಮೀಡಿಯಾ ಸೆಲ್ ಗಳು ಹುಟ್ಟಿಕೊಂಡಿವೆಯೋ ಈ ರಾಜಕಾರಣ ತಂತ್ರಗಾರಿಕೆಯ ಪಿತಾಮಹ ಈ ಪ್ರಶಾಂತ್ ಕಿಶೋರ್ ದಿ ಗ್ರೇಟ್. ಪ್ರಶಾಂತ್ ನಡೆಸಿದ ಮತದಾನ ಪೂರ್ವ ಸಮೀಕ್ಷೆಗಳು ಈವರೆಗೂ ಹುಸಿ ಹೋಗಿಲ್ಲ. ಇತ್ತೀಚೆಗೆ ಕೇಂದ್ರ ಬಿಜೆಪಿ ಮುಖವಾಣಿ ರಿಪಬ್ಲಿಕ್ ರಿಲೀಸ್ ಮಾಡಿತ್ತಲ್ಲ ಪ್ರಶಾಂತ್ ಕಿಶೋರ್ ರ ಧ್ವನಿಮುದ್ರಿಕೆ ಅದರಲ್ಲೂ ಕ್ಲಬ್ ಜರ್ನೋದ ಮಿತ್ರರೊಂದಿಗೆ ಕ್ಯಾಶುವಲ್ ಮಾತುಕಥೆಯಲ್ಲಿಯೂ ಪ್ರಶಾಂತ್ ಕಿಶೋರ್ ಆಡಿದ ಅಷ್ಟೂ ಮಾತುಗಳು ನಿಜವಾಗಿವೆ. ಬಿಜೆಪಿ ಅದ್ಭುತ ಸಾಧನೆ ಮಾಡಲಿದೆ, ನರೇಂದ್ರ ಮೋದಿಯ ಹವಾ ಬಂಗಾಳದಲ್ಲಿಯೂ ಶುರುವಾಗಿದೆ. ಆದರೆ ಬಿಜೆಪಿ 100ರ ಗಡಿ ದಾಟುವುದಿಲ್ಲ ಮತ್ತೆ ಮಮತಾ ಸರ್ಕಾರ ಅಧಿಕಾರಕ್ಕೇರಲಿದೆ ಎಂದು ಪಿಕೆ ಭವಿಷ್ಯ ನುಡಿದಿದ್ದರು.
***
“ರಾಜಕೀಯದ ಪಡಸಾಲೆಯಲ್ಲಿ ಅಂಡೂರಲು ಬೇರೆಯದ್ದೇ ಆದ ಕಸವು ಬೇಕು; ಕೆಸರಲ್ಲಿ ಹೊರಳಿದಾಗ ಮಾತ್ರ ಮೊಸರು ಗಡಿಗೆ ಲಭ್ಯ:”
ಮೆಟ್ರೋಮ್ಯಾನ್ ಇ ಶ್ರೀಧರನ್ ಕೇರಳ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಘೋಷಿಸಿಕೊಂಡು ಚುನಾವಣೆ ಎದುರಿಸಿದವರು. ಪಿಣರಾಯಿ ವಿಜಯನ್ ಅಭಿವೃದ್ಧಿ ಅಲೆ ಮತ್ತು ಕರೋನಾ ನಿರ್ವಹಣೆಯ ಯಶಸ್ಸಿನ ಕಾರಣ ಕೊಚ್ಚಿ ಹೋದರು. ಕೇರಳದಲ್ಲಿ ಗೆದ್ದಿದ್ದು ಎಡರಂಗವಲ್ಲ ಕೇವಲ ಪಿಣರಾಯಿ ವಿಜಯನ್ ಎಂಬ ಸ್ವತಂತ್ರ ವ್ಯಕ್ತಿಯ ಅದ್ಭುತ ಮತ್ತು ಸಮರ್ಥ ಆಡಳಿತ. ಕರೋನಾ ಹೊರತಾಗಿಯೂ ನೂರಾರು ಉದಾಹರಣೆಗಳು ಇದಕ್ಕೆ ಸಿಗುತ್ತವೆ. ಕರ್ನಾಟಕದಲ್ಲಿ ಸಿಂಗಂ ಆಗಿದ್ದ ಅಣ್ಣಾಮಲೈ ತಮಿಳುನಾಡಿನಲ್ಲಿ ಬಿಜೆಪಿಯ ಪಯೋನಿಯರ್ ಲೀಡರ್ ಆಗಲು ಹೋದವರು. ಆದರೆ ಹೈಕಮಾಂಡ್ ಮರ್ಜಿಗೆ ರಾಜ್ಯವನ್ನು ಒಪ್ಪಿಸಲು ಒಪ್ಪದ ತಮಿಳರು ಸಿಂಗಂರನ್ನು ಮುಲಾಜಿಲ್ಲದೇ ತಿರಸ್ಕರಿಸಿದರು. ಒಬ್ಬ ಸಮರ್ಥ ಕಾಪ್ ಸಮರ್ಥ ರಾಜಕಾರಣಿ ಆಗಲು ಸಾಧ್ಯವಿಲ್ಲ ಎಂದು ಈ ಚುನಾವಣೆ ಸಾಬೀತು ಮಾಡಿತು. ಖುಷ್ಬೂ ಸುಂದರ್ ಕಾಂಗ್ರೆಸ್ ನಲ್ಲಿದ್ದಾಗ ಖಂಡತುಂಡವಾಗಿ ಬಿಜೆಪಿಯ ಐಡಿಯಾಲಜಿಗಳನ್ನು ವಿರೋಧಿಸುತ್ತಿದ್ದವರು. ನಿಮಗೆ ನೆನಪಿದ್ದರೇ ಇಂಡಿಯಾ ಟುಡೇಯ ವಿಶೇಷ ಡಿಬೇಟ್ ನಲ್ಲಿ ಬಿಜೆಪಿಯ ಮಾಳವಿಕಾ ಅವಿನಾಶ್ ವರ್ಸಸ್ ಕಾಂಗ್ರೆಸ್ ನ ಖುಷ್ಬೂ ಟಾಕ್ ವಾರ್ ರಿಕಾಲ್ ಮಾಡಿಕೊಳ್ಳಿ. ತಮಿಳರು ನಟಿ ಖುಷ್ಬೂಗೆ ದೇವಸ್ಥಾನ ಕಟ್ಟಿಸಿಕೊಟ್ಟರು ಆದರೆ ಬಿಜೆಪಿಯಿಂದ ನಿಂತ ಒಂದೇ ಕಾರಣಕ್ಕೆ ರಿಜೆಕ್ಟ್ ಮಾಡಿದರು. ಐಟಿ ಇಡಿ ದಾಳಿಯ ಭಯಕ್ಕೆ ತಾನು ಟೀಕಿಸುತ್ತಿದ್ದ ಐಡಿಯಾಲಜಿಯನ್ನೆ ಅಪ್ಪಿಕೊಂಡು ಬಿಜೆಪಿ ಮನೆ ಸೇರಿದ ಖುಷ್ಬು ಸ್ಕೋರ್ ಮಾಡಲಿಲ್ಲ.
ತಮಿಳರು, ಮಿಸ್ಟರ್ ಪರ್ಫೆಕ್ಟ್ ಕಮಲ್ ಹಸನ್ ರ ಅಭಿನಯಕ್ಕೆ ಮಾರುಹೋದಂತೆ ನೇತಾಗಿರಿಗೆ ಮಣೆ ಹಾಕಲಿಲ್ಲ. ಕೊಯಂಬತ್ತೂರ್ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಕಮಲ್ ಸೋಲುವ ಮೂಲಕ ತಮಗಿನ್ನೂ ರಾಜಕೀಯ ಒಲಿದಿಲ್ಲ ಎನ್ನುವುದನ್ನು ನಿಕ್ಕಿ ಮಾಡಿಕೊಂಡರು. ಕರ್ನಾಟಕದ ಬ್ಯೂರೋಕ್ರಸಿಯಲ್ಲಿ ಉತ್ತಮ ಹೆಸರು ಮಾಡಿದ್ದ ರತ್ನಪ್ರಭಾರನ್ನು ಹೈಜಾಕ್ ಮಾಡಿಕೊಂಡಿದ್ದ ಬಿಜೆಪಿ ತಿರುಪತಿಯಲ್ಲಿ ತನ್ನ ಅಭ್ಯರ್ಥಿಯನ್ನಾಗಿಸಿತ್ತು. ಆದರೆ ಆಂಧ್ರದಲ್ಲಿ ಅಧಿಕಾರಾರೂಢ ಜಗನ್ ಪ್ರಭೆಯ ಮುಂದೆ ರತ್ನಪ್ರಭೆ ಮಂಕಾದರು. ವೈಎಸ್ಆರ್ ಕಾಂಗ್ರೆಸ್ ನ ಮಡ್ಡಿಲಾ ಗುರುಮೂರ್ತಿ ವಿರುದ್ಧ ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿಗೆ ಸೋಲಾಯಿತು. ಇವೆಲ್ಲಾ ಏನು ಹೇಳುತ್ತವೆ? ವೃತ್ತಿ ಬದುಕಿನಲ್ಲಿ ಏನೇ ಸಾಧಿಸಿದರೂ ರಾಜಕೀಯದಲ್ಲಿ ಅದು ವರ್ಕ್ ಔಟ್ ಆಗಲ್ಲ. ರಾಜಕಾರಣಿಯಾಗಲು ಬೇರೆಯದ್ದೇ ಆದ ತಂತ್ರಗಾರಿಕೆ ಬೇಕು. ರಾಜಕಾರಣಕ್ಕೆ ಅದರದ್ದೇ ಆದ ಪ್ರತ್ಯೇಕ ಪಾಠಶಾಲೆಯಿದೆ. ಎಲ್ಲರೂ ರಾಜಕಾರಣಿಯಾಗಲು ಸಾಧ್ಯವಿಲ್ಲ. ಲೀಡರ್ ಆಗಬೇಕಿದ್ದರೇ ನೂರು ಕೆರೆ ನೀರು ಕುಡಿದು ಕೆಸರು ಮಣ್ಣಿನಲ್ಲಿ ಮಿಂದು ಸಗಣಿ ಗೊಬ್ಬರಗಳಲ್ಲಿ ಮುಳುಗಿ ಉಸಿರಾಡಿ ಬದುಕುವ ಭಂಡತನ ಬೇಕು. ಅದಿದ್ದರೇ ಮಾತ್ರ ಅಧಿಕಾರ, ರತ್ನಖಚಿತ ಸಿಂಹಾಸನ, ಒಡ್ಡೋಲಗ, ದರ್ಬಾರು..
-ವಿಶ್ವಾಸ್ ಭಾರದ್ವಾಜ್ (ವಿಭಾ)
***
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ