ಬಿರ್ಭೂಮ್ ಹಿಂಸಾಚಾರ ಪ್ರಕರಣ: ಸಿಬಿಐ ತನಿಖೆಗೆ ಆದೇಶಿಸಿದ ಕಲ್ಕತ್ತಾ ಹೈಕೋರ್ಟ್
ಪಶ್ಚಿಮ ಬಂಗಾಳದ ಬಿರ್ಭೂಮ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್ ಇಂದು ಸಿಬಿಐ ತನಿಖೆಗೆ ಆದೇಶಿಸಿದೆ ಮತ್ತು ಕೇಂದ್ರ ತನಿಖಾ ಸಂಸ್ಥೆಯಿಂದ ಸ್ಥಿತಿ ವರದಿಯನ್ನು ಕೇಳಿದೆ. ಸೋಮವಾರ ಟಿಎಂಸಿ ಪಂಚಾಯತ್ ನಾಯಕನ ಹತ್ಯೆಯಾದ ಕೆಲವೇ ಗಂಟೆಗಳ ನಂತರ ರಾಮ್‌ಪುರಹತ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರು ಸಜೀವ ದಹನಗೊಂಡಿದ್ದರು.
ಪ್ರಕರಣದ ತನಿಖೆಯನ್ನು ಇದುವರೆಗೆ ವಿಶೇಷ ತನಿಖಾ ತಂಡ ನಡೆಸುತ್ತಿದ್ದು, ಹಲವರನ್ನು ಬಂಧಿಸಲಾಗಿದೆ. ಈ ಆದೇಶವನ್ನು ತಡೆಹಿಡಿಯಲು ಮತ್ತು ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮಾಡಿದ ರಾಜ್ಯ ಸರ್ಕಾರದ ಮನವಿಯನ್ನು ಸ್ವೀಕರಿಸಲು ಹೈಕೋರ್ಟ್ ಇಂದು ನಿರಾಕರಿಸಿದೆ.
ಹತ್ಯೆಗಳ ಕುರಿತು ಚರ್ಚೆಗೆ ಸಮಯಾವಕಾಶ ನೀಡಲು ಸ್ಪೀಕರ್ ನಿರಾಕರಿಸಿದರು ಎಂದು ಬಿಜೆಪಿ ನಾಯಕರು ವಾಕ್‌ಔಟ್ ಮಾಡುವಾಗ ರಾಜ್ಯ ವಿಧಾನಸಭೆಯು ಪ್ರತಿಭಟನೆಗೆ ಸಾಕ್ಷಿಯಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಹಿಂಸಾಚಾರವನ್ನು ಖಂಡಿಸಿದ್ದು, ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದಕ್ಕೂ ಮುನ್ನ ಗೃಹ ಸಚಿವಾಲಯ ರಾಜ್ಯ ಸರ್ಕಾರದಿಂದ ವರದಿ ಕೇಳಿತ್ತು.