ಮೊದಲ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿದ ವೆಸ್ಟ್ ಇಂಡೀಸ್
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಜಯ ಸಾಧಿಸಿದೆ. ರೋಚಕವಾಗಿ ಸಾಗಿದ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನ ವೆಸ್ಟ್ ಇಂಡೀಸ್ 4 ವಿಕೆಟ್ಗಳಿಂದ ಇಂಗ್ಲೆಂಡ್ ತಂಡವನ್ನು ಪರಾಭವಗೊಳಿಸಿತ್ತು. ಈ ಮೂಲಕ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ 1-0ಯಿಂದ ಮುನ್ನಡೆ ಸಾಧಿಸಿದೆ.
ಗೆಲ್ಲಲು 200 ರನ್ ಗಳ ಸುಲಭ ಸವಾಲನ್ನು ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ ಒಂದು ಹಂತದಲ್ಲಿ 27 ರನ್ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಚೇಸ್ ಮತ್ತು ಬ್ಲ್ಯಾಕ್ ವುಡ್ ಅವರು ವೆಸ್ಟ್ ಇಂಡೀಸ್ ತಂಡಕ್ಕೆ ಆಧಾರವಾಗಿ ನಿಂತ್ರು. ಚೇಸ್ ಅವರು 37 ರನ್ ಸಿಡಿಸಿದ್ರೆ, ಬ್ಲ್ಯಾಕ್ವುಡ್ ಆಕರ್ಷಕ 95 ರನ್ ಸಿಡಿಸಿದ್ರು. ಅಂತಿಮವಾಗಿ ವೆಸ್ಟ್ ಇಂಡೀಸ್ ಇಂಗ್ಲೆಂಡ್ ತಂಡವನ್ನು ತವರಿನಲ್ಲೇ ಸೋಲುಣಿಸಿತ್ತು.
ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ 204 ರನ್ ಗಳಿಸಿದ್ರೆ, ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ ನಲ್ಲಿ 318 ರನ್ ದಾಖಲಿಸಿ, 104 ರನ್ಗಳ ಮುನ್ನಡೆ ಸಾಧಿಸಿತ್ತು. ಇನ್ನು ಇಂಗ್ಲೆಂಡ್ ಎರಡನೇ ಇನಿಂಗ್ಸ್ ನಲ್ಲಿ 313 ರನ್ಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಪರಿಣಾಮ ವೆಸ್ಟ್ ಇಂಡೀಸ್ ತಂಡಕ್ಕೆ 200 ರನ್ಗಳ ಟಾರ್ಗೆಟನ್ನು ಇಂಗ್ಲೆಂಡ್ ತಂಡ ನೀಡಿತ್ತು. ಅಂತಿಮವಾಗಿ ವೆಸ್ಟ್ ಇಂಡೀಸ್ ಆರು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು.
ಕೋವಿಡ್-19 ಸೋಂಕಿನಿಂದ ಕಳೆದ ಮೂರು ತಿಂಗಳಿಂದ ವಿಶ್ವ ಕ್ರಿಕೆಟ್ ಸ್ತಬ್ದಗೊಂಡಿತ್ತು. ಇದೀಗ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕ್ವಾರಂಟೈನ್ ಮಾರ್ಗಸೂಚಿಗಳೊಂದಿಗೆ ಕ್ರಿಕೆಟ್ ಆಟಕ್ಕೆ ಚಾಲನೆ ನೀಡಿವೆ.