ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಂತೆ ಇಡೀ ಕರ್ನಾಟಕದ ಹೃದಯ ಬಡಿತವೇ ನಿಂತಂತಾಗಿತ್ತು. ಆ ನಂತರ ರಾಜ್ಯದಲ್ಲಿ ಹೃದಯದ ಕಾಳಜಿ ಹೆಚ್ಚಾಗಲು ಆರಂಭವಾಯಿತು. ಹೀಗಾಗಿ ಹೃದಯದ ಕಾಳಜಿಗಾಗಿ ರಾಜ್ಯ ಸರ್ಕಾರವು ಪುನೀತ್ ಹೃದಯ ಜ್ಯೋತಿ ಯೋಜನೆಯನ್ನು ಜಾರಿಗೆ ತಂದಿತು.
ಹಠಾತ್ ಹೃದಯಾಘಾತ ತಡೆಯುವುದಕ್ಕಾಗಿ ಈ ಯೋಜನೆ ಜಾರಿಗೊಳಿಸಲಾಯಿತು. ಈ ಯೋಜನೆಯಿಂದಾಗಿ ಹಲವಾರು ಜನರಿಗೆ ಉಪಯೋಗವಾಗಿದೆ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಡಿ 11 ಸಾವಿರ ಜನರಲ್ಲಿ ಗಂಭೀರವಾಗಿರುವ ಸಮಸ್ಯೆ ಪತ್ತೆಯಾಗಿದ್ದು, ನಾಲ್ಕೇ ತಿಂಗಳಲ್ಲಿ 10 ಜನರ ಬದುಕು ಅರಳಿ ನಿಂತಿದೆ. ಆ ಕುಟುಂಬಸ್ಥರ ಕಣ್ಣಲ್ಲಿ ಕಾಂತಿ ಮೂಡಿದೆ.
ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಮೊದಲನೇ ಹಂತದಲ್ಲಿ ಹೆಸರಲ್ಲಿ ಹಬ್ ಸ್ಪೋಕ್ ಮಾದರಿಯನ್ನು ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ 45 ಆಸ್ಪತ್ರೆಗಳಲ್ಲಿ ಆರಂಭಿಸಲಾಗಿತ್ತು. ಮೊದಲ ಹಂತದ ಯೋಜನೆಯಲ್ಲಿ ಜೀವ ರಕ್ಷಕವಾಗಿರುವ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಸಿಕ್ಕಿರಲಿಲ್ಲ. ಈ ಚುಚ್ಚು ಮದ್ದಿನ ಬೆಲೆ 25 ಸಾವಿರ. ಆದರೆ, 2024ರ ಮಾರ್ಚ್ ನಿಂದ ಈ ಚುಚ್ಚು ಮದ್ದು ಲಭ್ಯವಾಯಿತು. ಹೀಗಾಗಿ ಇಲ್ಲಿಯವರೆಗೆ 10 ಜನರಿಗೆ ಚುಚ್ಚು ಮದ್ದು ನೀಡಿ ಪ್ರಾಣ ಉಳಿಸಲಾಗಿದೆ.
ಸರ್ಕಾರವು ಹೃದಯಾಘಾತದಿಂದ ಜನರ ಪ್ರಾಣ ಉಳಿಸುವುದಕ್ಕಾಗಿ ಸಾಕಷ್ಟು ಅನುದಾನ ಮೀಸಲಿಟ್ಟಿದೆ. ಮೊದಲ ಹಂತದಲ್ಲಿ 7 ಕೋಟಿ ರೂ. ಮತ್ತು ಎರಡನೇ ಹಂತದಲ್ಲಿ 25 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಯೋಜನೆಯಿಂದಾಗಿಯೋ ಏನೋ ಅಥವಾ ಪುನೀತ್ ಅವರ ಸಾವಿನಿಂದ ಯಾರಿಗೂ ಹೃದಯಾಘಾತವಾಗದಿರಲಿ ಎಂಬ ಜನರು ಬಯಸಿದ್ದ ಹಾರೈಕೆಯಿಂದಲೋ ಈಗ ಯೋಜನೆಯಡಿ ಬರುತ್ತಿರುವ ಜನರು ಗುಣಮುಖರಾಗುತ್ತಿದ್ದಾರೆ.
ಹೀಗಾಗಿ ಈ ಯೋಜನೆಯನ್ನು 2025ರ ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ತಾಲೂಕುಗಳಿಗೆ ವಿಸ್ತರಿಸುವ ಗುರಿ ಕೂಡ ಯನ್ನು ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಈ ಯೋಜನೆಯನ್ನು ನಾಲ್ಕು ಹಂತದಲ್ಲಿ ವಿಸ್ತರಿಸಲಾಗುತ್ತಿದೆ. 2025-26ನೇ ಸಾಲಿನೊಳಗೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಈ ಹೃದಯ ಜ್ಯೋತಿ ಯೂನಿಟ್ನಲ್ಲಿ ಕೆಲಸ ಮಾಡುವ ವೈದ್ಯರು, ದಾದಿಯರು, ಟೆಕ್ನೀಷಿಯನ್, ಆಂಬ್ಯುಲೆನ್ಸ್ ಚಾಲಕರಿಗೆ ತರಬೇತಿ ನೀಡಲಾಗಿದೆ. ಅಲ್ಲದೆ, ಜಯದೇವ ಹೃದ್ರೋಗ ಆಸ್ಪತ್ರೆ, ಇಲಾಖೆಯಿಂದಲೂ ಆನ್ಲೈನ್ ಮೂಲಕ ತರಬೇತಿ ನೀಡಲಾಗಿದೆ.
ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಈ ಹೃದಯ ಜ್ಯೋತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇಲ್ಲಿಯವೆಗೆ 71 ತಾಲೂಕು ಆಸ್ಪತ್ರೆಗಳೂ ಸೇರಿದಂತೆ ಒಟ್ಟು 86 ಸರಕಾರಿ ಆಸ್ಪತ್ರೆಗಳನ್ನು ಸ್ಪೋಕ್ ಕೇಂದ್ರಗಳನ್ನಾಗಿ ಹಾಗೂ ಜಯದೇವ ಸೇರಿದಂತೆ 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹಬ್ ಕೇಂದ್ರಗಳನ್ನಾಗಿ ಮಾಡಲಾಗಿದೆ.
ಹಾಗಾದರೆ ಯಾರೂ ಈ ಆಸ್ಪತ್ರೆಗೆ ಸೇರಿ ಯಾವ ರೀತಿ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕೆಂದರೆ, ಎದೆನೋವು ಕಾಣಿಸಿಕೊಂಡವರು ಸ್ಪೋಕ್ ಕೇಂದ್ರಗಳಿಗೆ ಭೇಟಿ ನೀಡುವ ವೇಳೆ 6 ನಿಮಿಷದೊಳಗೆ ಅವರ ಸ್ಥಿತಿ ಹೇಗಿದೆ ಎಂಬುವುದನ್ನು ಎಐ ತಂತ್ರಜ್ಞಾನದ ಮೂಲಕ ಪತ್ತೆಹಚ್ಚಲಾಗುತ್ತದೆ. ಸಂಸ್ಥೆಯ ಎಐ ತಂತ್ರಜ್ಞಾನದ ಮೂಲಕ ಮೇಲ್ವಿಚಾರಣೆ ನಡೆಸಿ, ಎದೆನೋವು ಕಾಣಿಸಿಕೊಂಡವರಿಗೆ ಇಸಿಜಿ ಪರೀಕ್ಷೆಯಲ್ಲಿ ತೀವ್ರ ಹೃದಯಾಘಾತವಾಗುವ ಮೂನ್ಸೂಚನೆ ಇದ್ದರೆ ತಕ್ಷಣ ಮಾಹಿತಿ ನೀಡಿ, ಚಿಕಿತ್ಸೆಗೆ ನೆರವಾಗುತ್ತಾರೆ. ಈಗಾಗಲೇ ಈ ಯೋಜನೆಯಿಂದಾಗಿ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತಿದೆ. ಯೋಜನೆ ಆರಂಭಿಸಿದಾಗ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಲಭ್ಯವಿರಲಿಲ್ಲ. ಇಸಿಜಿ ಮಾಡಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿತ್ತು. ಚುಚ್ಚುಮದ್ದು ಬಂದ ಬಳಿಕ ರೋಗಿಗಳಿಗೆ ಸಾಕಷ್ಟು ಅನುಕೂಲವಾಗಿದ್ದು, ಹೃದಯಾಘಾತದಿಂದ ಹಲವರು ಪಾರಾಗುತ್ತಿದ್ದಾರೆ. ಕರ್ನಾಟಕ ಹೃದಯಾಘಾತದಿಂದ ಪಾರಾಗಿದೆ. ಕರ್ನಾಟಕದ ಹೃದಯ ಬಡಿತ ನಿಲ್ಲುವುದಿಲ್ಲ. ಕರ್ನಾಟಕ ಆರೋಗ್ಯವಾಗಿದೆ ಎಂದು ರೋಗಿಗಳೇ ಹೇಳುವಂತಾಗಿದೆ. ಇದೇ ವರ್ಷದ ಮಾರ್ಚ್ ದಿಂದ ರಂಭವಾದ 25 ಸಾವಿರ ರೂ. ವೆಚ್ಚ ಚುಚ್ಚು ಮದ್ದು ಇಲ್ಲಿಯವರೆಗೆ 10 ಜನರಿಗೆ ನೀಡಿದ್ದು, ಎಲ್ಲರೂ ಕುಟುಂಬದೊಂದಿಗೆ ಸೌಖ್ಯವಾಗಿ ಜೀವನ ಸಾಗಿಸುತ್ತಿದ್ದಾರೆ.