ಕಾಂಗ್ರೆಸ್ ಪಕ್ಷವು ನೀಡಿರುವ ಗ್ಯಾರಂಟಿಗೆ ಅರ್ಥವೇನಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ವ್ಯಂಗ್ಯವಾಡಿದ್ದಾರೆ.
ವಿಧಾನಸಭೆ ಚುನಾವಣೆ ರೂಪುರೇಷೆಗಳ ಕುರಿತು ಕಾರ್ಯಕರ್ತರ ನಡುವೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಸದಾ ಸುಳ್ಳುಗಳನಾಡುತ್ತದೆ. ಭ್ರಷ್ಟಾಚಾರದ ಭರವಸೆ ನೀಡುತ್ತದೆ, ವಾರಂಟಿಯೇ ಎಕ್ಸ್ಪೈರ್ ಆಗಿರುವ ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿಗೆ ಬೆಲೆ ಇಲ್ಲ ಎಂದು ಹೇಳಿದ್ದಾರೆ.
ಟ್ರ‍್ಯಾಕ್ಟರ್‌ಗೆ ಮಾರುತಿ ಕಾರು ಚಕ್ರ ಹಾಕಿದರೆ ಅದು ಓಡುತ್ತದೆಯೇ? ಒಂದೇ ತರಹದ ಚಕ್ರ ಇದ್ದರೆ ಮಾತ್ರ ಓಡುತ್ತದೆ. ಅದೇ ರೀತಿ ಡಬಲ್ ಎಂಜಿನ್ ಸರ್ಕಾರ ಕೂಡ ಹಾಗೆಯೇ. ವಿಕಾಸದ ವೇಗ ಡಬಲ್ ಎಂಜಿನ್ ಸರ್ಕಾರದಲ್ಲಿ ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕಕ್ಕೆ, ಬೆಂಗಳೂರಿಗೆ ವಿಶ್ವದಲ್ಲಿ ಉತ್ತಮ ಹೆಸರಿದೆ. 2014 ರ ವರೆಗೆ ಏಮ್ಸ್ ಸಂಸ್ಥೆಗಳ ಸಂಖ್ಯೆ 7 ಇದ್ದವು. ನಾವು ಬಂದ ಮೇಲೆ 3 ಪಟ್ಟು ಸಂಸ್ಥೆಗಳು ಹೆಚ್ಚಾದವು. ಸದ್ಯ 20 ಏಮ್ಸ್ ಸಂಸ್ಥೆಗಳು ಇವೆ. ಫಲಾನುಭವಿಗಳ ಕುರಿತು ಯೋಚನೆ ಮಾಡುತ್ತಿರಲಿಲ್ಲ. ನಾವು ಫಲಾನುಭವಿಗಳ ಇಚ್ಚೆಗನುಸಾರ ಮನೆ ಕಟ್ಟಿಸಿಕೊಡುತ್ತಿದ್ದೇವೆ. ನೀರು, ವಿದ್ಯುತ್, ಅಡುಗೆ ಅನಿಲ ಎಲ್ಲವೂ ಸಿಗುತ್ತಿದೆ. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಮೊದಲಿಗಿಂತ ಈಗ ಹೆಚ್ಚು ಸುಧಾರಣೆ ಆಗಿದೆ ಎಂದು ಹೇಳಿದ್ದಾರೆ.
ಇತಿಹಾಸ, ಸಂಸ್ಕೃತಿ, ಆಧ್ಯಾತ್ಮಿಕತೆ, ಆಚಾರ ವಿಚಾರಗಳಲ್ಲಿ ಕರ್ನಾಟಕ ಸಮೃದ್ಧವಾಗಿದೆ. ಕರ್ನಾಟಕದ ಜನ ಭಕ್ತಿಯ ಶಕ್ತಿಯಿಂದ ಪ್ರಯೋಜನವನ್ನು ಮೋದಿ ಪಡೆಯುತ್ತಿದ್ದಾರೆ. ಕನ್ನಡ ಸಾಹಿತ್ಯ ಸಂಸ್ಕೃತಿ ಓದುವ ಪಾಲಿಸುವ ಸಂಸ್ಕೃತಿ ಇಲ್ಲಿದೆ. ಕುವೆಂಪು ಸಾಹಿತ್ಯವನ್ನೂ ಓದುತ್ತಾರೆ ಎಂದರು.
ನಾವು ಮುಂದಿನ 5 ವರ್ಷಗಳು ಎಂತಹ ಕೆಲಸವನ್ನು ಮಾಡಲಿದ್ದೇವೆ ಎಂದು ಜನತೆಗೆ ತಿಳಿಸಲಿದ್ದೇವೆ, ಯಾರ ಹತ್ತಿರ ರಾಜ್ಯದ ಅಭಿವೃದ್ಧಿಯ ನೀಲಿನಕ್ಷೆ ಇದೆಯೋ ಜನರು ಅವರನ್ನೇ ಆಯ್ಕೆ ಮಾಡಬೇಕು. ಕರ್ನಾಟಕದ ಏರ್ಪೋರ್ಟ್, ರೈಲ್ವೆ ನಿಲ್ದಾಣ, ಮೆಟ್ರೋ ಪ್ರಶಂಸೆಗೆ ಪಾತ್ರವಾಗಿವೆ. ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕವೂ ಕೂಡ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರಾಜ್ಯ ಸರ್ಕಾರವು 4 ಸಾವಿರ ರೂ, ಕೇಂದ್ರ ಸರ್ಕಾರವು 10 ಸಾವಿರ ರೂ ನೀಡುತ್ತಿದೆ. ಜನರಿಗೆ ಒಟ್ಟು 1 ಸಾವಿರ ರೂ. ಬರುತ್ತಿದೆ. ಯಾವ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿಲ್ಲವೋ ಆ ರಾಜ್ಯದಲ್ಲಿ ಕೇಂದ್ರದ ಯಾವ ಯೋಜನೆಯನ್ನೂ ಸಫಲವಾಗಲು ಬಿಡುತ್ತಿಲ್ಲ. ಜನರಿಗೆ ಯೋಜನೆ ತಲುಪದೇ ಇರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.