ಲಕ್ನೋ : ಭಾರತೀಯರು ಶತಶತಮಾನಗಳಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದೆ. ಸದ್ಯ ಭಾರತದಾದ್ಯಂತ ರಾಮನಾಮ ಜಪ ಮೊಳಗುತ್ತಿದೆ. ರಾಮನೂರು ಅಯೋಧ್ಯೆ ನವ ವಧುವಿನಂತೆ ಶೃಂಗಾರಗೊಂಡಿದ್ದು, ದೀಪಾವಳಿಯಂತಹ ಸಂಭ್ರಮ ಮನೆ ಮಾಡಿದೆ.

ಇನ್ನು ಭಾರತೀಯರ ಆತ್ಮಗೌರವದ ಪ್ರಶ್ನೆಯಾದ ರಾಮ ಮಂದಿರ ನಾಗರ ಶೈಲಿಯಲ್ಲಿ ನಿರ್ಮಾಣವಾಗುತ್ತಿದ್ದು, ಒಳಮುಖವಾಗಿ ತಿರುಗುವ ಗೋಪುರ ಇದರ ವೈಶಿಷ್ಟ್ಯವಾಗಿದೆ. ಒಂದಕ್ಕಿಂತ ಹೆಚ್ಚು ಗೋಪುರಗಳ ನಿರ್ಮಾಣವಾಗಲಿದೆ. ಅತಿ ಉದ್ದದ ಗೋಪುರದ ಕೆಳಗೆ ಗರ್ಭಗುಡಿ ಇರಲಿದ್ದು, ರಾಮಮಂದಿರ ಪರಿಧಿ ವೃತ್ತಾಕಾರದಲ್ಲಿದೆ. ಗರ್ಭಗುಡಿ ಮೇಲ್ಭಾಗ ಅತ್ಯಂತ ಎತ್ತರದ ಶಿಖರ ನಿರ್ಮಾಣವಾಗಲಿದೆ.
ಮರ್ಯಾದ ಪುರುಷೋತ್ತಮ ಮಂದಿರ ವಿಶ್ವದ ಮೂರನೇ ಅತೀದೊಡ್ಡ ಹಿಂದೂ ದೇಗುಲವಾಗಿರಲಿದೆ. 84 ಸಾವಿರ ಚದರಡಿ ಪ್ರದೇಶದಲ್ಲಿ ಪ್ರಧಾನ ಮಂದಿರ ನಿರ್ಮಾಣವಾಗಲಿದ್ದು, ಒಂದೇ ಬಾರಿಗೆ 10 ಸಾವಿರ ಭಕ್ತರು ದರ್ಶನ ಮಾಡಬಹುದು. ಒಟ್ಟು 30 ಸಾವಿರ ಟನ್ ಗಳಷ್ಟು ಬನ್ಸಿ ಪಹಾಡ್ ಪುರ್ ಕಲ್ಲು (ಪಿಂಕ್ ಸ್ಟೋನ್) ಮಂದಿರಕ್ಕೆ ಬಳಸಲಾಗುತ್ತಿದೆ.

ಶ್ರೀರಾಮಧಾಮ ಮೂರು ಅಂತಸ್ತು ಇರಲಿದ್ದು, ನೆಲಮಹಡಿಯಲ್ಲಿ ರಾಮ್ ಲಲ್ಲಾ ವಿಗ್ರಹ, ಕೋಲಿ, ರಂಗಮಂಟಪ. ಮೊದಲ ಮಹಡಿಯಲ್ಲಿ ರಾಮದರ್ಬಾರ್ ಮೂರ್ತಿ, ನೃತ್ಯ ಮಂಟಪ, ಗರ್ಭಗುಡಿ ಇರಲಿದೆ. ಮಂದಿರಕ್ಕೆ ಪಂಚ ಗೋಪುರಗಳಿರಲಿದ್ದು, 366 ಸ್ತಂಭಗಳು ಆಧಾರವಾಗಿರುತ್ತವೆ. ಮಂದಿರ 2 ಭಾಗದಲ್ಲಿ ಸಿಂಹದ್ವಾರಗಳಿದ್ದು, ಒಟ್ಟು 24 ಅಮೃತಶಿಲೆಯ ಬಾಗಿಲುಗಳು ಇರಲಿವೆ. ಇನ್ನು ಮಂದಿರಕ್ಕೆ ಪಂಚ ಗೋಪುರಗಳಿರಲಿವೆ.

ಇದಿಷ್ಟು ಮಂದಿರದ ವಿಶೇಷತೆಗಳಾಗಿದ್ದರೇ, ರಾಮ ಮಂದಿರದ ಆವರಣದಲ್ಲಿ, 4 ಚಿಕ್ಕ ಮಂದಿರ ಇರಲಿದೆ. ಭರತ, ಲಕ್ಷ್ಮಣ, ಸೀತಾ, ಗಣೇಶ ದೇವರ ಮಂದಿರವನ್ನು ನಿರ್ಮಿಸಲಾಗುತ್ತದೆ. ರಾಮಮಂದಿರದ ಮುಂಭಾಗ ಎತ್ತರದ ವಿಜಯ ಸ್ತಂಭ. ಎಡಭಾಗದಲ್ಲಿ ಬೃಹತ್ ಕಲಾ ವೇದಿಕೆ. ಕಲಾ ವೇದಿಕೆಗೆ 4 ದಿಕ್ಕುಗಳಿಂದಲೂ ಪ್ರವೇಶ ದ್ವಾರ.ವೇದಿಕೆ ಸನಿಹದಲ್ಲೇ ಶ್ರೀರಾಮ ಸಂಶೋಧನಾ ಕೇಂದ್ರ. ಮಂದಿರ ಸಂತರಿಗೆ, ಸಿಬ್ಬಂದಿಗೆ ಕ್ವಾರ್ಟರ್ಸ್, ರಾಮಕಥಾ ಕುಂಜ್. 8 ಅತಿಥಿಗೃಹ, ಭೋಜನಶಾಲೆ ಸೇರಿ ಸುಸಜ್ಜಿತ ಕಾಂಪೌಂಡ್ ಇರಲಿದೆ.








