ಇದು ಅಂತಿಂಥ ಕುರ್ಚಿ ಅಲ್ಲ…ಈ ಕುರ್ಚಿಗೆ ಯಾವ ಅಂಟಿನ ಉಂಡೆ ಹಾಕಿದ್ದಾರೋ ಗೊತ್ತಿಲ್ಲ… ಇಂತಹ ಕುರ್ಚಿ ಭೂತ ಕಾಲದಲ್ಲಿ ಇದ್ದಂಗಿಲ್ಲ.. ವರ್ತಮಾನ ಕಾಲದಲ್ಲಿ ಯಾರು ತಡೆಯುವಂಗಿಲ್ಲ.. ಭವಿಷ್ಯತ್ ಕಾಲದಲ್ಲಿ ಏನಾಗುತ್ತೆ ಅನ್ನೋದು ಗೊತ್ತಿಲ್ಲ.. ಅಷ್ಟೊಂದು ಗ್ಯಾರಂಟಿ ಈ ಕುರ್ಚಿಗಿದೆ. ಅಂದ ಹಾಗೇ ಈ ಕುರ್ಚಿ ಯಾವುದು ಗೊತ್ತಾ…?….?…?
ಅದುವೇ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರ ಕುರ್ಚಿ…ಹೌದು, 2002ರಿಂದ 2026ರವರೆಗೆ ಸತತ 24 ವರ್ಷ ಕೆಓಎ ಅಧ್ಯಕ್ಷರ ಕುರ್ಚಿ ಮೇಲೆ ಕುಳಿತಿರುವ ಸರ್ವಧಿಕಾರಿಯ ಹೆಸರು ಕೆ. ಗೋವಿಂದ ರಾಜು. ಸತತ 21 ವರ್ಷದಿಂದ ಕಾರ್ಯದರ್ಶಿಯಾಗಿರೋದು ಅನಂತ್ ರಾಜ್. ನಂಬಿದ್ರೆ ನಂಬಿ.. ಬಿಟ್ರೆ ಬಿಡಿ.. 2002ರಲ್ಲಿ ಇದೇ ಗೋವಿಂದ ರಾಜು ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದಾಗ ನಾನು ಉದಯವಾಣಿ ಪತ್ರಿಕೆಯಲ್ಲಿ ಸಂದರ್ಶನ ಮಾಡಿದ್ದೆ. ಆಗಿದ್ದ ಸಿಎಂ ಎಸ್.ಎಂ.ಕೃಷ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಗೋವಿಂದರಾಜು ಕರ್ನಾಟಕ ಕ್ರೀಡಾ ಕ್ಷೇತ್ರದ ದಿಕ್ಸೂಚಿಯನ್ನೇ ಬದಲಾಯಿಸ್ತೇನೆ ಅನ್ನೋ ರೀತಿ ಬಿಲ್ಡಪ್ ಕೊಟ್ಟಿದ್ದರು. ಆದ್ರೆ ಮಾಡಿದ್ದು ಅಷ್ಟಕ್ಕಷ್ಟೇ.. ಮನಸ್ಸು ಮಾಡಿದ್ರೆ ಗೋವಿಂದರಾಜುಗೆ ಕರ್ನಾಟಕ ಕ್ರೀಡಾ ಕ್ಷೇತ್ರಕ್ಕೆ ಹೊಸ ಆಯಾಮವನ್ನೇ ನೀಡಬಹುದಿತ್ತು. ಆದ್ರೆ ಹಾಗೇ ಮಾಡಲಿಲ್ಲ. ತನ್ನ ವಿರುದ್ಧ ಅಪಸ್ವರ ಎತ್ತಿರುವ ಕ್ರೀಡಾ ಸಂಸ್ಥೆಗಳನ್ನು ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯಿಂದ ನಿರ್ಬಂಧ ಹೇರಿ ತನಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವ ಪದ್ದತಿಯನ್ನು ಜಾರಿಗೊಳಿಸಿದ್ದರು. ಹೀಗಾಗಿ ಯಾರು ಕೂಡ ಗೋವಿಂದರಾಜು ವಿರುದ್ಧ ಧ್ವನಿ ಎತ್ತುತ್ತಿರಲಿಲ್ಲ. ಒಂದು ವೇಳೆ ಧ್ವನಿ ಎತ್ತಿದ್ರೆ ಕೊರ್ಟು, ಮಾನಹಾನಿ ಕೇಸ್ ಫಿಕ್ಸ್ ಆಗಿರುತ್ತೆ. ಹೀಗಾಗಿ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರ ಸಹವಾಸವೇ ಬೇಡ ಅಂತ ಸೈಲೆಂಟ್ ಆಗಿದ್ದವರ ಸಂಖ್ಯೆಯೇ ಜಾಸ್ತಿ ಇದೆ.
ಹಾಲಿ ವಿಧಾನ ಪರಿಷತ್ ಸದಸ್ಯನಾಗಿ, ಸಿಎಂ ಆಪ್ತ ಕಾರ್ಯದರ್ಶಿಯಾಗಿರುವ ಗೋವಿಂದ ರಾಜು ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಮಹಾರಾಜನಾಗಿ ಕಳೆದ 24 ವರ್ಷಗಳಿಂದ ಹಿಟ್ಲರ್ ರೀತಿಯಲ್ಲೇ ಆಡಳಿತ ನಡೆಸಿಕೊಂಡು ಬರುತ್ತಿದ್ದಾರೆ. ವಿಶ್ವಮಟ್ಟದಲ್ಲಿ ರಾಜ್ಯದ ಯಾವುದೇ ಕ್ರೀಡಾಪಟು ಪ್ರಶಸ್ತಿ ಗೆಲ್ಲಲಿ ಸಿಎಂ ಭೇಟಿಯಾಗಿ ಫೋಟೋಗೆ ಫೋಸ್ ಕೊಡುವುದು ಬಿಟ್ರೆ ಬೇರೆನೂ ಸಹಾಯವನ್ನು ಮಾಡ್ತಿಲ್ಲ ಅನ್ನೋ ಆರೋಪವೂ ಕೇಳಿಬರುತ್ತಿದೆ. ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯನ್ನು ತನ್ನ ಮನೆಯಂತೆ ಮಾಡಿಕೊಂಡಿರುವ ಗೋವಿಂದರಾಜು ಅವರಿಗೆ ಒಬ್ಬ ವ್ಯಕ್ತಿ.. ಒಂದು ಹುದ್ದೆ ಅನ್ನೋ ನಿಯಮ ಅನ್ವಯ ಆಗಲ್ಲ. ಬಹುಶಃ. ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರೀಡಾ ಸಂಸ್ಥೆಗಳಲ್ಲಿ ಈ ರೀತಿಯಾಗಿ ಒಂದೇ ಹುದ್ದೆಗೆ ಅಂಟಿಕೊಂಡಿರುವ ಏಕೈಕ ಮಹಾ ಶೂರ ಅಂದ್ರೆ ಅದು ಗೋವಿಂದರಾಜು ಮಾತ್ರ.
ಹಾಗಂತ ಈ ಗೋವಿಂದರಾಜು ಮೇಲೆ ನನಗೇನೂ ದ್ವೇಷವೂ ಇಲ್ಲ.. ಅವರ ವಿರುದ್ಧ ಬರೆದು ನನಗೆ ಏನು ಆಗಬೇಕಿಲ್ಲ. ಆದ್ರೆ ಕಳೆದ 23 ವರ್ಷಗಳಿಂದ ಸತತವಾಗಿ ಒಂದೇ ಹುದ್ದೆಯನ್ನು ಅಲಂಕರಿಸಲು ಹೇಗೆ ಸಾಧ್ಯ ಅನ್ನೋದೇ ಯಕ್ಷ ಪ್ರಶ್ನೆ. ಯಾವುದೇ ಸಂಸ್ಥೆ ಆಗಿರಲಿ.. ಅಲ್ಲಿ ಕೆಲವೊಂದು ನಿಯಮಗಳಿರುತ್ತವೆ. ಒಂದು ಬಾರಿ ಅಧ್ಯಕ್ಷರಾದ್ರೆ ಮುಂದಿನ ಬಾರಿ ಅಧ್ಯಕ್ಷರಾಗಿ ಮುಂದುವರಿಯುವಂತಿಲ್ಲ. ಮತ್ತೊಂದು ಅವಧಿಗೆ ಸ್ಪರ್ಧೆ ಮಾಡೋ ನಿಯಮಗಳಿರುತ್ತವೆ. ಆದ್ರೆ ಸತತವಾಗಿ 24 ವರ್ಷ ಆಯ್ಕೆಯಾಗಿರುವುದನ್ನು ಸರ್ವಧಿಕಾರಿ ಅನ್ನೋ ಪದ ಬಳಕೆ ಮಾಡೋದರಲ್ಲಿ ತಪ್ಪೇನು ಇಲ್ಲ ಅನ್ಸುತ್ತೆ.
ಇದೀಗ ಸಿಎಂ ಆಪ್ತನ ವಿರುದ್ಧವೇ ಸಿಎಂ ಆಪ್ತನಾಗಿರೋ ಲೋಕೇಶ್ವರ್ ಕೂಡ ಗೋವಿಂದರಾಜು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಖೋ ಖೋ ಸಂಸ್ಥೆಯ ಅಧ್ಯಕ್ಷರಾಗಿರೋ ಲೋಕೇಶ್ವರ್, ಗೋವಿಂದರಾಜು ನಡೆ ಮತ್ತು ಏಕಪಕ್ಷೀಯ ಧೋರಣೆ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರ ಹಾಗೂ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಒಂದು ಖೋ ಖೋ ಸಂಸ್ಥೆಗೆ ಅನುದಾನವನ್ನು ನೀಡಿಲ್ಲ. ಆದ್ರೆ ಈಗ ಖೋ ಖೋ ವಿಶ್ವ ಕಪ್ ಗೆದ್ದ ಭಾರತ ತಂಡದಲ್ಲಿದ್ದ ಇಬ್ಬರು ಕನ್ನಡಿಗರನ್ನು ಸಿಎಂ ಭೇಟಿ ಮಾಡಿಸುವ ಮೂಲಕ ಗೋವಿಂದರಾಜು ಫುಲ್ ಬಿಲ್ಡಪ್ ತೆಗೆದುಕೊಂಡಿದ್ದಾರೆ. ಹಾಗಂತ ಗೋವಿಂದ ರಾಜು ಅವರ ಈ ಕಾಯಕ ಇದೇನೂ ಹೊಸತಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕ್ರೀಡಾಪಟುಗಳು ಪ್ರಶಸ್ತಿ ಗೆದ್ದಾಗ ಗೋವಿಂದರಾಜು ಸಿಎಂ ಎದುರು ಬಿಲ್ಡಪ್ ತೆಗೆದುಕೊಳ್ಳುವುದು ಮಾಮೂಲಿ.. ಅದು ಗೊತ್ತಿರುವ ವಿಚಾರವೂ ಕೂಡ. ಅಷ್ಟೇ ಅಲ್ಲ, ಪರ ರಾಜ್ಯದ ಕ್ರೀಡಾಪಟುಗಳಿಗೂ ಬಹುಮಾನ ಘೋಷಣೆ ಮಾಡಿಸಿರುವ ಉದಾಹರಣೆ ಕೂಡ ಇದೆ.
ಇನ್ನು ಗೋವಿಂದರಾಜು ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ರಾಜ್ಯ ಖೋ ಖೋ ಸಂಸ್ಥೆಯ ಅಧ್ಯಕ್ಷರು ನೀಡಿದ್ದಾರೆ. ಒಂದು ವೇಳೆ ಈ ಪ್ರತಿಭಟನೆಗೆ ಎಲ್ಲಾ ರಾಜ್ಯದ ಕ್ರೀಡಾ ಸಂಸ್ಥೆಗಳು ಬೆಂಬಲ ನೀಡಿದ್ರೆ ರಾಜ್ಯ ಒಲಿಂಪಿಕ್ಸ್ ಸಂಸ್ಥೆಯ ದಾದಾಗಿರಿಯನ್ನು ಅಂತ್ಯಗೊಳಿಸಬಹುದು. ಈ ನಡುವೆ ವಿಶ್ವ ವಿಜೇತ ಭಾರತ ಖೋ ಖೋ ತಂಡದ ಆಟಗಾರರಾದ ಚೈತ್ರ ಮತ್ತು ಗೌತಮ್ ಕೂಡ ಕೆಓಎ ಅಧ್ಯಕ್ಷರ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮೈಸೂರಿನ ಚೈತ್ರಾ ಮತ್ತು ಮಂಡ್ಯದ ಗೌತಮ್ ಖುಷಿ ಖುಷಿಯಲ್ಲೇ ತವರಿಗೆ ಆಗಮಿಸಿದ್ದರು. ಮಣ್ಣಿನ ಮಕ್ಕಳ ಸಾಧನೆಗೆ ಇಡೀ ಕರುನಾಡೇ ಸಲಾಂ ಅಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಚೇರಿಗೆ ಆಹ್ವಾನಿಸಿ ಸನ್ಮಾನ ಮಾಡಿದ್ರು. ಆದ್ರೆ ಈ ಖುಷಿ ಹೆಚ್ಚು ಸಮಯ ಇರಲಿಲ್ಲ. ಇವರಿಬ್ಬರ ಸಾಧನೆಗೆ ಕರ್ನಾಟಕ ಸರ್ಕಾರ ಬೆಲೆ ಕಟ್ಟಿದ್ದು ಬರೀ ಐದು ಲಕ್ಷ. ಈ ಐದು ಲಕ್ಷ ಅವರ ತರಬೇತಿ ಖರ್ಚಿಗೂ ಸಾಕಾಗಲ್ಲ. ಕನಿಷ್ಠ ಒಂದು ಉದ್ಯೋಗದ ಭರವಸೆಯನ್ನು ಕೂಡ ನೀಡಲಿಲ್ಲ. ಈ ನಡುವೆ, ಚೈತ್ರಾ ಸಿಎಂ ಬಳಿ ತನ್ನ ತಂದೆಯ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಕೆಓಎ ಅಧ್ಯಕ್ಷ ಗೋವಿಂದ ರಾಜು ಕೆರಳಿಕೆಂಡವಾಗಿದ್ದಾರೆ. ಅದನ್ನೆಲ್ಲಾ ಸಿಎಂ ಬಳಿ ಹೇಳುವ ಹಾಗಿಲ್ಲ ಅಂತ ಬೆದರಿಸಿದ್ದಾರಂತೆ. ಸಿಎಂ ತವರಿನಾಗಿರುವ ಚೈತ್ರಾ ಸಹಜವಾಗಿ ತನ್ನ ತಂದೆಯ ಕಷ್ಟವನ್ನು ಹೇಳಿಕೊಂಡಿರುವುದು ಗೋವಿಂದ ರಾಜುಗೆ ಮಹಾ ಅಪರಾಧವಾದಂತಿದೆ. ಹೀಗಾಗಿ ಚೈತ್ರಾ ಮತ್ತು ಗೌತಮ್ ಇಬ್ಬರು ಕೂಡ ಸಿಎಂ ಬಹುಮಾನದ ಹಣವನ್ನು ತಿರಸ್ಕರಿಸಿದ್ದಾರೆ.
ಈ ಬಹುಮಾನದ ಹಣವನ್ನು ತಿರಸ್ಕರಿಸಿರುವ ಬಗ್ಗೆ ಕೆಲವು ಅವಿವೇಕಿಗಳು ಚೈತ್ರಾ ಮತ್ತು ಗೌತಮ್‍ಗೆ ಅಹಂ ಅಂತ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ತೆರಿಗೆ ಹಣವನ್ನು ಸ್ವೀಕರಿಸಿಲ್ಲ. ಸಂಸದರು ಕೊಟ್ಟ ಬಂಗಾರದ ಚೈನ್ ಮತ್ತು 20 ಸಾವಿರ ಹಣವನ್ನು ಸ್ವೀಕರಿಸಿದ್ದಾರೆ. ಇದು ಕರುನಾಡಿನ ಜನತೆಗೆ ಮಾಡಿರುವ ಅವಮಾನ ಅಂತ ಯಾರೋ ಒಬ್ಬ ಅವಿವೇಕಿ ಬರೆದುಕೊಂಡಿದ್ದಾನೆ. ಆದ್ರೆ sಅವನಿಗೆ ಏನು ಗೊತ್ತು. ಕೋಚ್, ದಾನಿಗಳು ಹಾಗೂ ತನ್ನ ಸ್ವಂತ ದುಡ್ಡಿನಲ್ಲಿ ಅಭ್ಯಾಸ ನಡೆಸಿ ಈ ಮಟ್ಟಕ್ಕೆ ಬಂದಿರೋದು ಎಂಬುದು. ಬಹಮಾನ ಘೋಷಣೆ ಮಾಡಿರೋದು ತೆರಿಗೆ ಹಣವಂತೆ. ಲೂಟಿ ಮಾಡಿ ಕೋಟಿ ಕೋಟಿ ಜೇಬು ತುಂಬಿಸಿಕೊಳ್ಳುತ್ತಿರುವಾಗ ತೆರಿಗೆ ಹಣ ನೆನಪಿಗೆ ಬಂದಿಲ್ಲ ಅನ್ಸುತ್ತೆ. ಅದನ್ನು ಬಿಟ್ಟು ಖೋ ಖೋ ಅನ್ನೋ ಅಪ್ಪಟ ಗ್ರಾಮೀಣ ಕ್ರೀಡೆಯಲ್ಲಿ ಅದ್ಭುತ ಸಾಧನೆ ಮಾಡಿರುವುದಕ್ಕೆ ಹೆಮ್ಮೆ ಪಡೆಬೇಕು. ಜೈಲಿಗೆ ಹೋಗಿ ಬಂದವರಿಗೆ ಮೆರವಣಿಗೆ ಮಾಡೋ ನಮ್ಮ ಜನ ಕ್ರೀಡಾ ಸಾಧಕರನ್ನು ಕಡೆಗಣಿಸಿರುವುದು ವಿಪರ್ಯಾಸವೇ ಸರಿ.
ಇನ್ನು ಕೆಲವರು ಕುಂಭ ಮೇಳದಲ್ಲಿ ಮೊನಾಲಿಸಾಗೆ ಸಿಕ್ಕ ಜನಪ್ರಿಯತೆ ಚೈತ್ರಾಗೆ ಸಿಗಲಿಲ್ಲ ಅಂತ ಹೇಳುತ್ತಿದ್ದಾರೆ. ನನಗೆ ಅನ್ನಿಸುವ ಪ್ರಕಾರ ಈ ರೀತಿಯ ಹೋಲಿಕೆಯೇ ಅಸಂಬಧ್ಧ. ಎಲ್ಲಿಯ ಚೈತ್ರಾ.. ಎಲ್ಲಿಯಾ ಮೊನಾಲಿಸಾ.. ಹತ್ತು ಹನ್ನೇರಡು ವರ್ಷಗಳಿಂದ ಖೋ ಖೋ ಆಟವೇ ತನ್ನ ಸರ್ವಸ್ವ ಅಂತ ನಂಬಿಕೊಂಡು, ತನ್ನ ಕನಸನ್ನು ನನಸಾಗಿಸಿರೋ ಚೈತ್ರಾ ಜನಪ್ರಿಯತೆಯನ್ನು ದಯವಿಟ್ಟು ಮೊನಾಲಿಸಾಗೆ ಹೋಲಿಸಬೇಡಿ.
ಕಟ್ಟಕಡೆಯದಾಗಿ ಇಬ್ಬರು ಹಳ್ಳಿಯ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರೋದಕ್ಕೆ ನಾವು ಹೆಮ್ಮೆ ಪಡಬೇಕು. ಆದ್ರೆ ಇನ್ನಷ್ಟು ಹಳ್ಳಿಯ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕಾದ್ರೆ ನಮ್ಮ ಕ್ರೀಡಾ ಸಂಸ್ಥೆಗಳನ್ನು ಮೊದಲು ಕ್ಲೀನ್ ಮಾಡಬೇಕು. ಅದರಲ್ಲೂ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಸರ್ವಾಧಿಕಾರಿ ಧೋರಣೆ ಅಂತ್ಯವಾಗಬೇಕು. ಕ್ಲೀನ್ ಕೆಓಎ ಅಭಿಯಾನ ಶುರು ಆಗಲೇಬೇಕು.. ಆಗ ಮಾತ್ರ ಕರ್ನಾಟಕದ ಕ್ರೀಡಾಪಟುಗಳ ಏಳಿಗೆ ಸಾಧ್ಯ..ಏನತೀರಾ..?
ಕೃಪೆ: ಸನತ್ ರೈ