ಬೆಂಗಳೂರು : ಎಸ್ ಡಿಪಿಐ ನಿಷೇಧ ವಿಚಾರದ ಬಗ್ಗೆ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಲಿದ್ದು, ನಮ್ಮದೇನಿದ್ದರೂ ಏಕ್ ಮಾರ್ ದೋ ತುಕ್ಡಾ ಕ್ರಮ ಎಂದು ಸಚಿವ ಸಿ.ಟಿ ರವಿ ಹೇಳಿದ್ದಾರೆ. ವಿಧಾನಸೌಧದ ಬಳಿ ಇಂದಿನ ಕ್ಯಾಬಿನೆಟ್ ಸಭೆ ಬಗ್ಗೆ ಮಾತನಾಡಿದ ಸಿ.ಟಿ ರವಿ, ಯಾವುದೇ ಒಂದು ಘಟನೆ ಮೇಲೆ ನಿಷೇಧದಂತಹ ನಿರ್ಧಾರ ಮಾಡಲು ಸಾಧ್ಯವಿಲ್ಲ. ಆದರೆ ಈ ಹಿಂದೆ ನಡೆದಿರುವ ಹಲವಾರು ಸಮಾಜ ಘಾತುಕ ಘಟನೆಗಳ ಬಗ್ಗೆ ಕೂಡ ಸಾಕ್ಷಾಧಾರ ಕಲೆ ಹಾಕುವ ಕೆಲಸ ಆಗುತ್ತಿದೆ. ಯಾವುದೇ ಸಮಾಜ ಘಾತುಕ ಶಕ್ತಿಗಳನ್ನು ಸಹಿಸಿಕೊಳ್ಳುವ ಪ್ರಶ್ನೆ ಇಲ್ಲ. ನಾಳೆ ದಿನ ಕೋರ್ಟಿನಲ್ಲೂ ಈ ಕುರಿತಂತೆ ಉತ್ತರ ನೀಡಬೇಕಾದ ಸಂದರ್ಭ ಎದುರಾಗುತ್ತದೆ. ಆದ್ದರಿಂದ ಅದಕ್ಕೆ ಬೇಕಾದ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಚಿವರು, ಕೆಲವರು ರಾಜಕೀಯ ಕಾರಣಗಳಿಗಾಗಿ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಅವರಿಗೆ ಅಕ್ಕಿ ಮೇಲೆ ಆಸೆ, ಅಕ್ಕನ ಮಕ್ಕಳ ಮೇಲೂ ಪ್ರೀತಿ ಅನ್ನೋ ರೀತಿ ಮಾಡುತ್ತಿದ್ದಾರೆ. ಮತ ಬ್ಯಾಂಕ್ ರಾಜಕೀಯ ಇನ್ನಾದರೂ ಕಾಂಗ್ರೆಸ್ ನಾಯಕರು ಬಿಡಲಿ ಎಂದು ಕಿಡಿಕಾರಿದ್ದಾರೆ.
ಇನ್ನು ಯಾವುದೇ ಸಂಘಟನೆ ತಪ್ಪು ಮಾಡಿದರೂ ನಾವು ಅವರನ್ನು ಬಿಡುವುದಿಲ್ಲ ಎಂದ ರವಿ, ನಮ್ಮದೇನಿದ್ದರೂ ಏಕ್ ಮಾರ್ ದೋ ತುಕ್ಡಾ ಕ್ರಮ. ಬೆಂಗಳೂರು ಗಲಭೆಯಲ್ಲಿ ಉಂಟಾಗಿರುವ ಆಸ್ತಿ ನಷ್ಟವನ್ನು ಅವರಿಂದಲೇ ತುಂಬಿಸುತ್ತೇವೆ ಎಂದಿದ್ದಾರೆ.