ಹಾವೇರಿ : ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ ನೋಟಿಸ್ ನೀಡಿದ ವಿಚಾರವಾಗಿ ಡಿಕೆಶಿ “ಬ್ಲಾಕ್ ಮೇಲ್” ಹೇಳಿಕೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ”ಗಲಭೆ ಸಂಬಂಧ ಯಾರನ್ನೂ ಬ್ಲಾಕ್ ಮೇಲ್ ಮಾಡುವ ಪ್ರಶ್ನೆಯೇ ಇಲ್ಲ” ಎಂದು ತಿರುಗೇಟು ನೀಡಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರಿಗೆ ಈ ನೆಲದ ಕಾನೂನು ಗೊತ್ತಿದೆ ಎಂದು ಭಾವಿಸಿದ್ದೇನೆ. ಗಲಭೆಯಲ್ಲಿ ಯಾರು ಯಾರು ಇದ್ದಾರೆ. ಅವರನ್ನ ನೇರವಾಗಿ ಅರೆಸ್ಟ್ ಮಾಡೋದಿದೆ. ನೊಟೀಸ್ ಕೊಟ್ಟರೆ ತಪ್ಪೇನೂ ಇಲ್ಲ. ನಾವು ಕಾನೂನಾತ್ಮಕವಾಗಿ ಕೊಟ್ಟಿದ್ದೇವೆ. ಅವರು ತಪ್ಪು ಮಾಡಿದ್ದರೆ ಹೆದರಬೇಕು. ಇಲ್ಲದಿದ್ರೆ ಉತ್ತರ ಕೊಡಬೇಕು. ನಾವು ಕಾನೂನು ಪಾಲನೆ ಮಾಡಿದ್ದೇವೆ. ಅವರೂ ಮಾಡಬೇಕಾಗುತ್ತೆ ಎಂದು ಹೇಳಿದರು.
ಗಲಭೆ ಸಂಬಂಧ ಯಾರನ್ನೂ ಬ್ಲಾಕ್ ಮೇಲ್ ಮಾಡೋ ಪ್ರಶ್ನೆ ಇಲ್ಲ ಎಂದ ಗೃಹ ಸಚಿವ, ಅಖಂಡ ಶ್ರೀನಿವಾಸಮೂರ್ತಿ ಒಬ್ಬ ಜವಬ್ದಾರಿಯುತ ಶಾಸಕರು. ಅವರು ಏನು ದೂರು ಕೊಡಬೇಕೋ ಅದನ್ನ ಕೊಟ್ಟಿದ್ದಾರೆ. ಅವರ ದೂರಿನ ಆಧಾರದ ಮೇಲೆ ತನಿಖೆ ನಡೆಯುತ್ತಿದೆ. ಶಾಸಕ ಶ್ರೀನಿವಾಸ ಮೂರ್ತಿ ಭದ್ರತೆ ಕೇಳಿದ್ದಾರೆ. ಅವರಿಗೆ ಭದ್ರತೆ ಕೊಟ್ಟಿದ್ದೇವೆ ಅಂತ ಹೇಳಿದ್ದಾರೆ ಎಂದು ತಿಳಿಸಿದರು.









