ತಮಿಳುನಾಡು ಸರ್ಕಾರ ಮತ್ತೆ ಕಾವೇರಿ ನೀರಿಗಾಗಿ ಕ್ಯಾತೆ ತೆಗೆದಿದೆ. ವೇಳಾಪಟ್ಟಿಯಂತೆ ತಮಿಳುನಾಡು ಪಾಲಿನ ಕಾವೇರಿ ನೀರು ಬಿಡಬೇಕು. ಅಲ್ಲದೇ, ಜೂನ್ ಮತ್ತು ಜುಲೈ ಕೊರತೆ ನೀಗಿಸಲು ಕರ್ನಾಟಕ ರಾಜ್ಯಕ್ಕೆ ಸಲಹೆ ನೀಡಬೇಕು ಎಂದು ಸಿಎಂ ಎಂ.ಕೆ. ಸ್ಟ್ಯಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕಾವೇರಿ ನೀರು ಹಂಚಿಕೆಗೆ ಕರ್ನಾಟಕಕ್ಕೆ ಸೂಚನೆ ನೀಡಿ. ಭತ್ತದ ಬೆಳೆ ಉಳಿಸಲು ಕಾವೇರಿ ಡೆಲ್ಟಾದ ರೈತರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ನಮ್ಮ ಪಾಲಿನ ಕಾವೇರಿ ನೀರು ಬಿಡುಗಡೆಗೆ ಕರ್ನಾಟಕಕ್ಕೆ ಸೂಚಿಸಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಎಂದು ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಆರೋಪ ಮಾಡಿದ್ದಾರೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಅನ್ವಯ ಕರ್ನಾಟಕ ಸರ್ಕಾರ ನಡೆದುಕೊಳ್ಳಬೇಕು ಎಂದು ಪ್ರತಿಪಾದಿಸಿದ್ಧಾರೆ.
ತಮಿಳುನಾಡಿಗೆ ಕಳೆದ 2 ತಿಂಗಳಿನಿಂದ ಬಾಕಿ ಇರುವ 28.8 ಟಿಎಂಸಿ ನೀರು ಬಿಡುಗಡೆ ಆಗಿಲ್ಲ. ಕರ್ನಾಟಕ ರಾಜ್ಯದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ನಾಲ್ಕು ಪ್ರಮುಖ ಅಣೆಕಟ್ಟುಗಳಿಗೆ 91 ಟಿಎಂಸಿ ನೀರಿನ ಕೊರತೆ ಎದುರಾಗಿದೆ. ಭತ್ತ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ತಮಿಳುನಾಡಿನಲ್ಲಿ ಇರುವ ಮೆಟ್ಟೂರು ಅಣೆಕಟ್ಟು ಕಾವೇರಿ ನದಿ ಪಾತ್ರದ ಜನತೆಯ ಜೀವನಾಡಿ ಆಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.








