ಬೆಂಗಳೂರು : ಪಾಲಿಕೆ ಒಡೆತನಕ್ಕೆ ಒಳಪಟ್ಟ ಎಲ್ಲಾ ಆಸ್ತಿಗಳ ದಾಖಲಾತಿಗಳನ್ನು ಒಂದೆಡೆ ಸಂಗ್ರಹಿಸಿ ಡಿಜಿಟಲೈಜೇಷನ್ಗೊಳಿಸಿ, ಸುಸಜ್ಜಿತವಾದ “ಸ್ಟ್ರಾಗ್ ರೂಂ” ನಿರ್ಮಸಿ ಅದಕ್ಕೆ ಒಬ್ಬ ಅಧಿಕಾರಿಯನ್ನು ನಿಯೋಜಿಸಲು ಅಧಿಕಾರಿಗಳಿಗೆ ಮೇಯರ್ ಗೌತಮ್ ಕುಮಾರ್ ಸೂಚನೆ ನೀಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಒಡೆತನಕ್ಕೆ ಒಳಪಟ್ಟ ಆಸ್ತಿಗಳ ವಿಚಾರವಾಗಿ ಇಂದು ಆಸ್ತಿ ವಿಭಾಗದ ಅಧಿಕಾರಿಗಳ ಜೊತೆ ಸಭೆ ನಡೆಸಿದ ಮೇಯರ್ ಗೌತಮ್ ಕುಮಾರ್ ನಗರದಲ್ಲಿ ಪಾಲಿಕೆ ಒಡೆತನದ ಆಸ್ತಿಗಳ ವಿಚಾರವಾಗಿ, ಒಟ್ಟಾರೆ ಆಸ್ತಿಗಳು ಎಷ್ಟಿವೆ, ಗುತ್ತಿಗೆ ನೀಡಿರುವ ಆಸ್ತಿಗಳು, ಪಾಲಿಕೆಗೆ ವಶಪಡೆದಿರುವ ಆಸ್ತಿಗಳು, ಪಾಲಿಕೆ ಆಸ್ತಿಗಳ ಸಂರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದರು. ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಅಬ್ದುಲ್ ವಾಜೀದ್, ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್, ವಿಶೇಷ ಆಯುಕ್ತ(ಆಸ್ತಿಗಳು) ಮಂಜುನಾಥ್, ಕಾನೂನು ಕೋಶದ ಮುಖ್ಯಸ್ಥ ದೇಶಪಾಂಡೆ, ವಲಯ ಜಂಟಿ ಆಯುಕ್ತರುಗಳು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆ ಬಳಿಕ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಪಾಲಿಕೆ ಒಡೆತನದ 7,906 ಆಸ್ತಿಗಳ ಪೈಕಿ 324 ಆಸ್ತಿಗಳನ್ನು ಗುತ್ತಿಗೆ ನೀಡಲಾಗಿದೆ. 165 ಆಸ್ತಿಗಳ ಗುತ್ತಿಗೆ ಅವಧಿ ಚಾಲ್ತಿಯಲ್ಲಿರುತ್ತದೆ. 159 ಆಸ್ತಿಗಳ ಗುತ್ತಿಗೆ ಅವಧಿ ಮುಗಿದಿದೆ. ಅದರಲ್ಲಿ ಕೆಲವನ್ನು ಹಸ್ತಾಂತರ ಮಾಡಿಕೊಳ್ಳಲಾಗಿದೆ. ಇನ್ನು ಕೆಲವನ್ನು ಹಸ್ತಾಂತರ ಮಾಡಿಕೊಳ್ಳಬೇಕಿದೆ. ಆ ಬಗ್ಗೆ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಾಲಿಕೆ ಆಸ್ತಿಗಳಿಗೆ ಫೆನ್ಸಿಂಗ್ ಮಾಡಲು ಪಾಲಿಕೆ ಆಯವ್ಯಯದಲ್ಲಿ 20 ಕೋಟಿ ರೂ. ಮೀಸಲಿಡಲಾಗಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಪಾಲಿಕೆ ಒಡೆತನಕ್ಕೆ ಒಳಪಟ್ಟ ಆಸ್ತಿಗಳನ್ನು ನಿಗದಿತ ಸಮಯದಲ್ಲಿ ಹಿಂಪಡೆಯಲು ಕ್ರಮವಹಿಸಬೇಕು. ಈ ಸಂಬಂಧ ಪಾಲಿಕೆ ಆಸ್ತಿಗಳ ಸ್ಥಳದಲ್ಲಿ ನಾಮಫಲಕ ಅಳವಡಿಸಲು ಕ್ರಮವಹಿಸಲಾಗುವುದು. ಜೊತೆಗೆ ಸರ್ಕಾರ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA)ದ ವತಿಯಿಂದ ಪಾಲಿಕೆಗೆ ಹಸ್ತಾಂತರಿಸಿರುವ ಆಸ್ತಿಗಳ ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಎಲ್ಲಾ ಆಸ್ತಿಗಳನ್ನು ಸಂಬಂಧಪಟ್ಟ ಸಬ್ ರಿಜಿಸ್ಟಾರ್ ಕಛೇರಿಗಳಲ್ಲಿ ಕಡ್ಡಾಯವಾಗಿ ನೊಂದಾವಣಿ ಮಾಡಿಸಲು ಸೂಚಿಸಿದೆ. ಗುತ್ತಿಗೆ(ಲೀಜ್) ನೀಡಿರುವ ಎಲ್ಲಾ ಕಟ್ಟಡಗಳ ದಾಖಲಾತಿಗಳನ್ನು ಪುನರ್ ಪರಿಶೀಲಿಸಿ ಯಾವ್ಯಾವ ಆಸ್ತಿಗಳ ಗುತ್ತಿಗೆ ಮುಗಿದಿದೆ. ಅವರಿಗೆ ಇಂದಿನ ಮಾರುಕಟ್ಟೆ ದರ ನಿಗದಿಪಡಿಸುವುದು, ಹಾಗೂ ಭೂಮಾಪಕರು ಪ್ರತಿಯೊಂದು ಆಸ್ತಿ ಬಳಿ ತೆರಳಿ ಆಸ್ತಿಗಳನ್ನು ಮೌಲ್ಯಮಾಪನ ಮಾಡುವುದರ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದಲ್ಲದೆ ಆಸ್ತಿಗಳಿಗೆ ಪಿಐಡಿ(Property ID) ಸಂಖ್ಯೆ ನೀಡಲು ಸೂಚನೆ ನೀಡಲಾಗಿದೆ. ನ್ಯಾಯಾಲಯದಲ್ಲಿರುವ ಕೆಲವು ಆಸ್ತಿಗಳನ್ನು ಆಸ್ತಿ ವಿಭಾಗ ಹಾಗೂ ಕಾನೂನು ಕೋಶದ ಮುಖ್ಯಸ್ಥರು ಚರ್ಚಿಸಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಸಹಾಯ ಕಂದಾಯ ಅಧಿಕಾರಿಗಳು ಎಲ್ಲಾ ವಲಯಗಳಲ್ಲಿ ಬರುವ ಆಸ್ತಿಗಳ ಪಟ್ಟಿ ಸಿದ್ಧಪಡಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.









