ಕೆಪಿಟಿಸಿಎಲ್ ನೇಮಕಕ್ಕೆ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು ಕಡ್ಡಾಯ: ವಿ. ಸುನಿಲ್ ಕುಮಾರ್
ಬೆಂಗಳೂರು: ಕೆಪಿಟಿಸಿಎಲ್ ಇಲಾಖೆಯ ವಿವಿಧ ಹುದ್ದೆಗಳ ನೇಮಕಕ್ಕೆ ಇನ್ನೂ ಮುಂದೆ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು ಕಡ್ಡಾಯ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಅಪ್ಟಿಟ್ಯಾಡ್ ಪರೀಕ್ಷೆಗೂ ಮುನ್ನ ಕಡ್ಡಾಯವಾಗಿ ಕನ್ನಡ ಪರೀಕ್ಷೆ ಬರೆಯಬೇಕು ಹಾಗೂ ಅದರಲ್ಲಿ ಕನಿಷ್ಠ 50 ಅಂಕವನ್ನು ಪಡೆಯಬೇಕು ಎಂದು ಆದೇಶಿಸಲಾಗಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಮಾತ್ರ ಅರ್ಹತಾ ಪರೀಕ್ಷೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಸಿದ್ದಾರೆ.
ಈ ಹಿಂದೆ ನಡೆದ ನೇಮಕದಲ್ಲಿನ ವಿದ್ಯಮಾನದ ಮಾಹಿತಿ ಪಡೆದಿದ್ದ ಸಚಿವರು, ಮತ್ತೆ ಆ ರೀತಿ ಲೋಪ, ಅನ್ಯಾಯದ ಅಪಸ್ವರ ಮರುಕಳಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೆಪಿಟಿಸಿಎಲ್ ನೇಮಕದಲ್ಲಿ ಮತ್ತೆ ಕನ್ನಡ ಭಾಷಾ ಪರೀಕ್ಷಾ ಕಡ್ಡಾಯಗೊಳಿಸುವ ಮೂಲಕ ಕನ್ನಡಪರ ಸಂಘಟನೆಗಳ ಧ್ವನಿಗೂ ಸರಕಾರ ಸ್ಪಂದಿಸಿದೆ. ದೀರ್ಘಾವದಿ ನಂತರ ತುಂಬುತ್ತಿರುವ ಹುದ್ದೆಗಳು ಕನ್ನಡಿಗರು, ಕನ್ನಡ ಬಲ್ಲ ಅರ್ಹರಿಗೆ ದಕ್ಕುವ ರೀತಿಯಲ್ಲಿ ಕ್ರಮ ಕೈಗೊಂಡಿದೆ.
ಈ ಹಿಂದೆ ಸಹಾಯಕ ಕಿರಿಯ ಇಂಜಿನಿಯರ್ ಇನ್ನಿತರ ತಾಂತ್ರಿಕ ಹುದ್ದೆಗಳ ನೇಮಕದಲ್ಲಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿತ್ತು. ಇದರಿಂದ ಅನ್ಯರಾಜ್ಯಗಳ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಿತ್ತು. ವಿನಾಯಿತಿ ಲಾಭ ಪಡೆದ ಅನ್ಯರಾಜ್ಯಗಳ ಅದರಲ್ಲೂ ವಿಶೇಷವಾಗಿ ಆಂಧ್ರಪ್ರದೇಶದ ಅಭ್ಯರ್ಥಿಗಳು 60ಕ್ಕೂ ಹುದ್ದೆ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದರು ಇದರಿಂದ ರಾಜ್ಯದ ಅಭ್ಯರ್ಥಿಗಳಿಗೆ ಅನ್ಯಾಯವಾಗಿತ್ತು.