ಮೈಸೂರು: ಮಾಜಿ ಸಿಎಂ ಎಸ್‌ಎಂ. ಕೃಷ್ಣ ನಿಮಗೆ ರಾಜಕೀಯ ಜನ್ಮ ಕೊಟ್ಟಿದ್ದರು. ಆದರೆ, ಅವರ ಅಳಿಯ ಸಿದ್ಧಾರ್ಥ್ ಆತ್ಮಹತ್ಯೆಗೆ ಕಾರಣ ಯಾರು ಎಂಬುದನ್ನು ಜನರ ಮುಂದಿಡಿ ಎಂದು ಡಿಕೆ ಶಿವಕುಮಾರ್‌ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D.Kumaraswamy) ಪ್ರಶ್ನಿಸಿದ್ದಾರೆ.
ಮೈಸೂರು ಚಲೋ (Mysuru Chalo) ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಹಾಗೂ ಡಿಸಿಎಂ ನನ್ನ ಮತ್ತು ಯಡಿಯೂರಪ್ಪ ನಡುವೆ ಬಿರುಕು ಮೂಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಶ್ರಮಪಟ್ಟು 105 ಸ್ಥಾನವನ್ನು ಪಡೆದಿದ್ದಾಗ ಅಧಿಕಾರ ಸಿಗದ ಸಂದರ್ಭದಲ್ಲಿ ರಾಜಕೀಯವಾಗಿ ನನ್ನ ವಿರುದ್ಧ ಯಡಿಯೂರಪ್ಪ ಮಾತಾಡಿದ್ದಾರೆ. ಅದು ಸಹಜ. ವಿಧಾನಸಭೆಯಲ್ಲಿ ಅವತ್ತು ಯಡಿಯೂರಪ್ಪ ಅವರು ನನ್ನ ನಾಗರಹಾವು ಅಂದರು. ನಾನು ಡಿಕೆ ಶಿವಕುಮಾರ್ ಪಾಲಿಗೆ ನಾಗರಹಾವೇ ಎಂದು ಹೇಳಿದ್ದಾರೆ.
2018 ರಲ್ಲಿ ನಾನು ಆ ಬಂಡೆ ಕಲ್ಲು ನಂಬಿಕೊಂಡೆ ಬಂಡೆಯನ್ನು ಮೈ ಮೇಲೆ ಎಳೆದುಕೊಂಡೆ. ಸಿದ್ದರಾಮಯ್ಯ ಅವರು ಸಿಎಂ ಆದರೆ ನನಗೆ ಯಾಕೆ ಹೊಟ್ಟೆ ಉರಿ? ನನ್ನ ಪ್ರಶ್ನೆ ನಿಮ್ಮ ಅನ್ಯಾಯದ ವಿರುದ್ಧ. ಸಿಎಂ ಪತ್ನಿಗೆ ಬಂದಿರೋದು ಯಾರೋ ಒಬ್ಬರ ಜಮೀನಲ್ಲ. ಅದು ಸರ್ಕಾರದ ಜಮೀನು. ನೀವು ಸಹಿ ಹಾಕದೆ ಇರಬಹುದು. ನಿಮ್ಮ ಮೂಗಿನ ನೇರಕ್ಕೆ ಎಲ್ಲವೂ ನಡೆದಿದೆ. 14 ಸೈಟ್ ವಾಪಸ್ ಕೊಡಲು ಸಿದ್ಧನಿದ್ದೇನೆ ಅಂತಾರೆ. ಈಗ ಸೈಟ್ ವಾಪಸ್ ಕೊಟ್ಟರೆ ನೀವು ಮಾಡಿದ ಅಕ್ರಮ ಮುಚ್ಚಿ ಹೋಗುತ್ತಾ? ಎಂದು ಆರೋಪಿಸಿದ್ದಾರೆ.
ನಾನು ನನ್ನ ಮಗನ ಭವಿಷ್ಯಕ್ಕಾಗಿ ಅಣ್ಣನ ಮಗನ ಜೈಲಿಗೆ ಕಳಿಸಿದ್ದೇನೆ ಅಂತಾರೆ ಡಿಕೆ ಶಿವಕುಮಾರ್. ರೇವಣ್ಣನ ಮೇಲೆ ಕೇಸ್ ಇಲ್ಲ. ಕೇಸ್ ಸೃಷ್ಟಿ ಮಾಡ್ತೀರಾ ನೀವು? ರೇವಣ್ಣನ ಹೆಂಡತಿಯನ್ನು ಜೈಲಿಗೆ ಕಳುಹಿಸಲು ಸುಪ್ರೀಂ ಕೋರ್ಟ್‌ಗೆ ಹೋಗಿ ಲಾಯರ್‌ಗೆ ಹಣ ವೆಚ್ಚ ಮಾಡಿಲ್ವಾ ಡಿಕೆ ಶಿವಕುಮಾರ್? ನಿಮ್ಮಂಥ ಕುತಂತ್ರಿ, ಮನೆ ಹಾಳರು ಇದ್ದಾರಾ? ಎಂದು ಗುಡುಗಿದ್ದಾರೆ.
ನನ್ನ ಸಿಎಂ ಮಾಡಿದ್ದು ಯಡಿಯೂರಪ್ಪ, ಬಿಜೆಪಿ ಹಿರಿಯ ನಾಯಕರು. ನನ್ನನ್ನು ಕಾಂಗ್ರೆಸ್‌ನವರು ಸಿಎಂ ಮಾಡಲಿಲ್ಲ. ನಾನು ಅವತ್ತು ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕು ಎಂದುಕೊಂಡಿದ್ದೆ. ಆದರೆ ನಾನು ಅವತ್ತು ಮಾಡದ ತಪ್ಪಿಗೆ 15 ವರ್ಷ ಶಿಕ್ಷೆ ಅನುಭವಿಸಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.