ಕಾಂಗ್ರೆಸ್ ಕಟ್ಟಪ್ಪ ಡಿ.ಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದೆ. ಆದ್ರೆ ರಾಜಕೀಯ ಪಡಸಾಲೆಯಲ್ಲಿ ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂದು ಪ್ರಶ್ನೆ ಗಿರಿಗಿಟ್ಟಲೇ ಹೊಡೆಯಲು ಶುರು ಮಾಡಿದೆ. ಹಲವು ಮಾತುಕತೆ, ಚರ್ಚೆಗಳ ನಂತರ ಕಾಂಗ್ರೆಸ್ ಹೈಕಮಾಂಡ್ ಡಿಕೆಶಿಗೆ ಅಧ್ಯಕ್ಷಪಟ್ಟ ಕೊಟ್ಟಿದ್ದು, ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ಸ್ಥಾನ ಮತ್ತು ಶಾಸಕಾಂಗ ಪಕ್ಷದ ಸ್ಥಾನದಲ್ಲಿ ಮುಂದುವರೆಸಿದೆ. ಆ ಮೂಲಕ ಈ ಮೊದಲು ಉಪ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆಯನ್ನು ಸಾರಾಸಗಟಾಗಿ ತಳ್ಳಿ ಹಾಕಲಾಗಿದೆ.
ಡಿ.ಕೆ.ಶಿವಕುಮಾರ್ ಗೆ ರಾಜ್ಯ ಕಾಂಗ್ರೆಸ್ ನ ಜವಾಬ್ದಾರಿ ವಹಿಸಿದರೆ. ಸಿದ್ದರಾಮಯ್ಯ ಅವರಿಗೆ ಶಾಸಕಾಂಗ ಪಕ್ಷದ ನಾಯಕತ್ವದ ಗಟ್ಟಿಗೊಳಿಸಲಾಗಿದೆ. ಈ ಮೂಲಕ ಮುಂದಿನ ವಿಧಾನಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿ ಹುದ್ದೆಗೆ ತೀವ್ರ ಪೈಪೋಟಿ ಆರಂಭವಾಗುವ ಲಕ್ಷಣಗಳು ಗೋಚರಿಸಿವೆ.
ಹೆಬ್ಬುಲಿ ಡಿಕೆಶಿ ಆಗ್ತಾರಾ ಸಿಎಂ ಅಭ್ಯರ್ಥಿ?
ಸಾಮಾನ್ಯವಾಗಿ ಕಾಂಗ್ರೆಸ್ ನಲ್ಲಿ ಇಲ್ಲಿಯವರೆಗೂ ಒಂದು ಸಾಂಪ್ರದಾಯವಿತ್ತು. ಯಾರು ಕೆಪಿಸಿಸಿ ಅಧ್ಯಕ್ಷರಾಗಿರುತ್ತಾರೋ ಅವರೇ ಸಿಎಂ ಅಭ್ಯರ್ಥಿ ಎಂದು. ಆದ್ರೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರಿದ ಬಳಿಕ ಈ ಸಾಂಪ್ರದಾಯಕ್ಕೆ ಬ್ರೇಕ್ ಹಾಕಲಾಯಿತು. ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಾಗ ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ ಪರಮೇಶ್ವರ್ ಅವರನ್ನು ಕಡೆಗಣಿಸಿ ಸಿದ್ದರಾಮಯ್ಯ ಅವರನ್ನು ಕೈ ಹೈಕಮಾಂಡ್ ಸಿಎಂ ಪಟ್ಟದಲ್ಲಿ ಕೂರಿಸಿತು. ಆ ಮೂಲಕ ಕಾಂಗ್ರೆಸ್ ನ ಅಲಿಖಿತ ಸಾಂಪ್ರದಾಯಕ್ಕೆ ತಿಲಾಂಜಲಿ ಆಡಲಾಯಿತು. ಆದ್ರೆ ಈ ಬಾರಿ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿದ್ದು, ಒಂದು ವೇಳೆ ಮುಂದಿನ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಡಿಕೆಶಿ ಸಿಎಂ ಆಗ್ತಾರಾ ಅಥವಾ ಸಿದ್ದರಾಮಯ್ಯ ಮತ್ತೆ ನಾಡದೊರೆ ಆಗ್ತಾರಾ ಎಂಬುವುದರ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ.
ಏಕೆಂದ್ರೆ ಮಾಜಿ ಸಿಎಂ ಸಿದ್ದರಾಮಯ್ಯ ಈಗಲೂ ಪಕ್ಷದಲ್ಲಿ ಹಿಡಿತ ಸಾಧಿಸಿದ್ದಾರೆ. ಈಗಾಗಿಯೇ ಕಾಂಗ್ರೆಸ್ ಹೈಕಮಾಂಡ್ ಸಹ ಸಿದ್ದರಾಮಯ್ಯ ಅವರನ್ನು ಕಡೆಗಣಿಸಿದೇ ವಿರೋಧ ಪಕ್ಷದ ಸ್ಥಾನ ಮತ್ತು ಶಾಸಕಾಂಗ ಪಕ್ಷದ ಸ್ಥಾನದಲ್ಲಿ ಮುಂದುವರೆಸಿದೆ. ಇದು ಡಿಕೆಶಿವಕುಮಾರ್ ಅವರ ಸಿಎಂ ಆಗುವ ಕನಸಿಗೆ ಅಡ್ಡಿಯಾಗುವ ಸಾಧ್ಯತೆಗಳಿವೆ. ಅದರಲ್ಲೂ ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಸೈಡ್ ಲೈನ್ ಮಾಡುವುದು ಸಹ ಅಷ್ಟು ಸುಲಭದ ಮಾತಲ್ಲ.
“ಮುಂದಿನ ಬಾರಿ ನಾನೇ ಸಿಎಂ”
ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ನ ಮಾಸ್ ಲೀಡರ್, ಅಹಿಂದ ನಾಯಕ. ರಾಜ್ಯದಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ಹುಲಿಯಾನಿಗೆ ಬೆಂಬಲಿಗರ ಸಂಖ್ಯೆ ಏನು ಕಡಿಮೆ ಇಲ್ಲ. ಅದರಲ್ಲೂ ಸಿದ್ದರಾಮಯ್ಯ ಅವರಿಗೆ ರಾಜಕಾರಣದಲ್ಲಿ ಕ್ಲೀನ್ ಇಮೇಜ್ ಇದೆ. ಇದು ಸಿದ್ದರಾಮಯ್ಯ ಅವರ ಪ್ಲಸ್ ಪಾಯಿಂಟ್. ಈ ಎಲ್ಲಾ ಕಾರಣಗಳಿಂದ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ನಲ್ಲಿ ಹಿಡಿತ ಸಾಧಿಸಿದ್ದಾರೆ. ಅದರಲ್ಲೂ ಕಳೆದ ಬೈ ಎಲೆಕ್ಷನ್ ನಲ್ಲೂ ಮುಂದಿನ ಬಾರಿ ನಾನೇ ಸಿಎಂ ಎಂದು ಹೇಳಿಕೊಂಡಿದ್ದಾರೆ.
ಶೂಟರ್ ಗೆ ಟ್ರಬಲ್ ಆಗುತ್ತಾ ಇಡಿ
ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ ಶಿವಕುಮಾರ್ ಅವರಿಗೆ ಕಾನೂನಿನ ತೊಡಕುಗಳಿವೆ.ಇದು ಕಾಂಗ್ರೆಸ್ ಕಟ್ಟಪ್ಪನಿಗೆ ಟ್ರಬಲ್ ಆಗುವ ಸಾಧ್ಯತೆಗಳಿವೆ.
ಒಟ್ಟಾರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ಆಯ್ಕೆ ಪಕ್ಷಕ್ಕೆ ಹೊಸ ಹುರುಪು ನೀಡಿದೆ. ಹಲವು ಸವಾಲುಗಳ ಮಧ್ಯೆ ಟ್ರಬಲ್ ಶೂಟರ್ ಯಾವ ರೀತಿ ಪಕ್ಷವನ್ನು ಮುಂದುವರೆಸುತ್ತರೋ ಕಾದು ನೋಡಬೇಕಾಗಿದೆ.








