ಹತ್ಯೆಯಾಗಿರುವ ಚಿತ್ರದುರ್ಗದ ರೇಣುಕಾ ಸ್ವಾಮಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರೇಣುಕಾಸ್ವಾಮಿ ಪತ್ನಿ ಸಹನಾ (Renuka Swamy wife Sahana) ಈಗ ಮೂರು ತಿಂಗಳ ಗರ್ಭಿಣಿ. ಗಂಡನ ಹತ್ಯೆಯ ಸುದ್ದಿ ತಿಳಿದು ಸಹನಾ ಕುಸಿದು ಹೋಗಿದ್ದಾರೆ. ಈ ಮಧ್ಯೆ ದರ್ಶನ್ ಮತ್ತು ತಂಡಕ್ಕೆ ಹಿಡಿಶಾಪ ಹಾಕಿದ್ದಾರೆ.
ನೋವಿನ ಮಧ್ಯೆಯೂ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಮನೆಯವರ ಸಾವಿಗೆ ನ್ಯಾಯ ಸಿಗಬೇಕು. ಮದುವೆ ಆಗಿ ಒಂದು ವರ್ಷ ಆಗಿದೆ. ಈಗ ನಾನು ಪ್ರೆಗ್ನೆಂಟ್. ನನ್ನ ಗಂಡನಿಗೆ ಈ ರೀತಿ ಆಗಬಾರದಿತ್ತು. ಅಂದು ಮಧ್ಯಾಹ್ನ ನನ್ನ ಪತಿ ಫೋನ್ ಮಾಡಿದ್ದರು. ಆದರೆ, ಬೆಂಗಳೂರಿಗೆ ಹೋಗುವ ವಿಷಯ ಹೇಳಿರಲಿಲ್ಲ. ಅವರು ದರ್ಶನ್ ಅಭಿಮಾನಿ ಆಗಿರಲಿಲ್ಲ. ದರ್ಶನ್ (Darshan) ಆದರೂ ಆಗಲಿ, ಯಾರಾದರೂ ಆಗಲಿ ನನಗೆ ನ್ಯಾಯ ಬೇಕು ಎಂದು ಕಣ್ಣೀರು ಹಾಕಿದ್ದಾರೆ.
ನಾನು ಪ್ರೆಗ್ನೆಂಟ್. ಮುಂದೆ ಜೀವನ ಹೇಗೆ ಮಾಡೋದು? ಗಂಡನ ಜೀವಕ್ಕೆ ಹಾನಿ ಮಾಡಬಾರದಿತ್ತು. ವಾರ್ನಿಂಗ್ ಮಾಡಿ ಬಿಟ್ಟಿದ್ದರೆ ಸಾಕಿತ್ತು ಎಂದು ಹೇಳಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದಕ್ಕಾಗಿ ರೇಣುಕಾ ಸ್ವಾಮಿಯ ಹತ್ಯೆ ನಡೆದಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ದರ್ಶನ್ ಸೇರಿದಂತೆ 13 ಜನ ಅರೆಸ್ಟ್ ಆಗಿದ್ದಾರೆ.