ರಾತ್ರಿ 3.30ಕ್ಕೆ ಕೋಚ್ ಬಳಿ ರಿಷಬ್ ಪಂತ್ ಕ್ಷಮೆ ಕೇಳಿದ್ಯಾಕೆ..!
ರಿಷಬ್ ಪಂತ್.. ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಆಗಿ ರೂಪುಗೊಳ್ಳುತ್ತಿರುವ ಕ್ರಿಕೆಟಿಗ. ಹೊಡಿಬಡಿ ಆಟದ ಮೂಲಕವೇ ಗಮನ ಸೆಳೆಯುತ್ತಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ರಿಷಬ್ ಪಂತ್ ಅವರನ್ನು ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿದೆ.
ಅಂದ ಹಾಗೇ, ರಿಷಬ್ ಪಂತ್ ಕ್ರಿಕೆಟಿಗನಾಗಿ ರೂಪುಗೊಳ್ಳಲು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ಉತ್ತರಖಂಡ್ ನಲ್ಲಿ ಹುಟ್ಟಿದ್ರೂ ರಿಷಬ್ ಪಂತ್ ಕ್ರಿಕೆಟಿಗನಾಗಿ ಬೆಳೆದಿರುವುದು ದೆಹಲಿಯಲ್ಲಿ. ದೆಹಲಿಯ ಸೊನೆಟ್ ಕ್ರಿಕೆಟ್ ಕ್ಲಬ್ ನಲ್ಲಿ ಆಡಿ ಬೆಳೆದಿರುವ ರಿಷಬ್ ಪಂತ್ ಈಗ ಟೀಮ್ ಇಂಡಿಯಾದಲ್ಲಿ ಪ್ರಖರ ಸೂರ್ಯನಂತೆ ಕಂಗೊಳಿಸುತ್ತಿದ್ದಾರೆ.
ಇದೇ ವೇಳೆ ರಿಷಬ್ ಪಂತ್ ಅವರ ಬಾಲ್ಯದ ಕೋಚ್ ತಾರಕ್ ಸಿನ್ಹಾ ಅವರು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಈ ಘಟನೆಯ ಮೂಲಕ ರಿಷಬ್ ಪಂತ್ ಕ್ರಿಕೆಟ್ ಆಟದ ಮೇಲೆ ಯಾವ ರೀತಿ ಪ್ರೀತಿ ಇಟ್ಟುಕೊಂಡಿದ್ದರು ಎಂಬುದು ಗೊತ್ತಾಗುತ್ತದೆ. ಅಷ್ಟೇ ಅಲ್ಲ, ತನ್ನ ಗುರುವಿನ ಮೇಲೆ ಅಪಾರ ಭಕ್ತಿಯನ್ನಿಟ್ಟುಕೊಂಡಿದ್ದರು ಎಂಬುದು ಸಹ ತಿಳಿಯುತ್ತದೆ.
ಒಂದು ಬಾರಿ ರಿಷಬ್ ಪಂತ್ ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದರು. ಪಂತ್ ಅವರ ಬ್ಯಾಟಿಂಗ್ ತಾಲೀಮು ಅನ್ನು ಕೋಚ್ ತಾರಕ್ ಸಿನ್ಹಾ ಗಮನಿಸುತ್ತಿದ್ದರು. ಯಾಕೋ ರಿಷಬ್ ಪಂತ್ ಸರಿಯಾಗಿ ಅಭ್ಯಾಸ ನಡೆಸುತ್ತಿರಲಿಲ್ಲ. ಇದ್ರಿಂದ ಕೋಚ್ ತಾರಕ್ ಸಿನ್ಹಾ ಅವರು ರಿಷಬ್ ಪಂತ್ ಮೇಲೆ ಸಿಟ್ಟು ಮಾಡಿಕೊಂಡು ಹೊರನಡೆದಿದ್ದರು.
ಇದ್ರಿಂದ ಬೇಸರಗೊಂಡ ರಿಷಬ್ ಪಂತ್ ರಾತ್ರಿ ನಿದ್ದೆ ಮಾಡಲಿಲ್ಲ. ಗುರು ಯಾಕೆ ಸಿಟ್ಟು ಮಾಡಿಕೊಂಡಿದ್ದರು, ತಾನು ಏನು ತಪ್ಪು ಮಾಡಿದೆ ಅಂತ ಯೋಚನೆಯಲ್ಲಿದ್ದ ಪಂತ್ ಗೆ ನಿದ್ರೆಯೇ ಬರಲಿಲ್ಲ. ಅಲ್ಲದೆ ರಿಷಬ್ ಂತ್ ಮಧ್ಯರಾತ್ರಿ 3,30ರ ಸಮಯದಲ್ಲಿ ಕೋಚ್ ತಾರಕ್ ಸಿನ್ಹಾ ಅವರ ಮನೆ ಬಾಗಿಲು ಬಡಿದಿದ್ದರು.
ಈ ರಾತ್ರಿ ಯಾರು ಬಂದಿರಬಹುದು ಅನ್ನೋ ಯೋಚನೆಯಲ್ಲೇ ಬಾಗಿಲು ತೆರೆದಾಗ ಸಪ್ಪೆ ಮುಖ ಮಾಡಿಕೊಂಡಿದ್ದ ರಿಷಬ್ ಪಂತ್ ನಿಂತಿದ್ದರು. ಆಗ ಏನು ವಿಚಾರ ಅಂತ ಕೇಳಿದಾಗ ನೆಟ್ಸ್ ನಲ್ಲಿ ಸಿಟ್ಟು ಮಾಡಿಕೊಂಡು ಹೋಗಿದ್ರಲ್ಲ. ಅದಕ್ಕೆ ಕ್ಷಮೆ ಕೇಳೋಕೆ ಬಂದೆ ಅಂತ ರಿಷಬ್ ಪಂತ್ ಹೇಳಿದ್ರು. ಅಲ್ಲದೆ ಕೋಚ್ ಬಳಿ ಕ್ಷಮೆ ಕೂಡ ಕೇಳಿಕೊಂಡಿದ್ದರು. ಇದನ್ನು ತಿಳಿದ ತಾರಕ್ ಸಿನ್ಹಾ ಮನೆಯವರು ಎಳೆಯ ರಿಷಬ್ ಪಂತ್ ಮೇಲೆ ಸಿಟ್ಟು ಮಾಡಿಕೊಂಡಿದ್ದ ಸಿನ್ಹಾ ಮೇಲೂ ಅಸಮಾಧನಗೊಂಡಿದ್ದರು.
ಅಂದ ಹಾಗೇ ರಿಷಬ್ ಪಂತ್ ಈ ರೀತಿ ಮಾಡಿರುವುದಕ್ಕೂ ಒಂದು ಕಾರಣವೂ ಇದೆ. ರಿಷಬ್ ಪಂತ್ ತಾರಕ್ ಸಿನ್ಹಾ ಅವರ ನೆಚ್ಚಿನ ಶಿಷ್ಯನಾಗಿದ್ರು. ಅಲ್ಲದೆ ಒಂದು ಬಾರಿಯೂ ರಿಷಬ್ ಪಂತ್ ಮೇಲೆ ತಾರಕ್ ಸಿನ್ಹಾ ಸಿಟ್ಟು ಮಾಡಿಕೊಂಡಿರಲಿಲ್ಲ. ಆದ್ರೆ ನೆಟ್ಸ್ ವೇಳೆ ಸಿಟ್ಟು ಮಾಡಿಕೊಂಡಿರುವುದನ್ನು ರಿಷಬ್ ಪಂತ್ ಗೆ ತಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ರಾತ್ರಿ ಒಂದು ಗಂಟೆ ಪ್ರಯಾಣ ಮಾಡಿ ಗುರುವಿನ ಬಳಿ ಕ್ಷಮೆ ಕೇಳಿಕೊಂಡಿದ್ದರು ರಿಷಬ್ ಪಂತ್.
ಒಟ್ಟಾರೆ, ರಿಷಬ್ ಪಂತ್ ತಪ್ಪನ್ನು ಸರಿಪಡಿಸಿಕೊಳ್ಳುವ ಗುಣವನ್ನು ಹೊಂದಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದು ಆರಂಭದಲ್ಲಿ ಹಲವು ರೀತಿಯ ತಪ್ಪುಗಳನ್ನು ಮಾಡಿ ತಂಡದಿಂದ ಹೊರನಡೆದಿದ್ದರು.. ಬಳಿಕ ತಪ್ಪುಗಳನ್ನು ಸರಿಪಡಿಸಿಕೊಂಡು ಸದ್ಯ ಟೀಮ್ ಇಂಡಿಯಾದಲ್ಲಿ ಮತ್ತೆ ಸ್ಥಾನ ಪಡೆದು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೆ ರೆಡಿಯಾಗುತ್ತಿದ್ದಾರೆ. ರಿಷಬ್ ಪಂತ್ ಮೇಲೆ ಸಾಕಷ್ಟು ಸಾಕಷ್ಟು ನಿರೀಕ್ಷೆಗಳಿವೆ. ಜೂನ್ 18ರಿಂದ ಇಂಗ್ಲೆಂಡ್ ನ ಸೌತಂಪ್ಟನ್ ನಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಟೆಸ್ಟ್ ಚಾಂಪಿಯನ್ ಷಿಪ್ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.