ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ
ಮೈಸೂರು: ಪತಿ ಕಿರುಕಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಮಹದೇವನಗರದಲ್ಲಿ ನಡೆದಿದೆ.
ಗುಂಡ್ಲುಪೇಟೆಯ ಭಾಗ್ಯಾ (29) ಮೃತ ದುರ್ದೈವಿ. ಘಟನೆ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರು 10 ವರ್ಷಗಳ ಹಿಂದೆ ಮಹದೇವನಗರದ ಸೋಮಣ್ಣ ಜೊತೆ ವಿವಾಹವಾಗಿದ್ದರು. ಮದುವೆ ಆಗಿ ಹತ್ತು ವರ್ಷಗಳಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಈ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಇತ್ತೀಚೆಗೆ ಪತಿ ಸೋಮಣ್ಣ ಬೇರೊಂದು ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎಂದು ಹೇಳಲಾಗಿದೆ.
ಈ ವಿಚಾರವಾಗಿಯೂ ಇಬ್ಬರ ನಡುವೆ ಜಗಳ ನಡೆದಿದೆ. ಇದರಿಂದ ಬೇಸತ್ತ ಭಾಗ್ಯಾ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮನೆಯ ಆಚೆ ಮಲಗಿದ್ದ ಪತಿ ಸೋಮಣ್ಣ, ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೋಡುತ್ತಿದ್ದಂತೆಯೇ ನಾಪತ್ತೆಯಾಗಿದ್ದಾನೆ.









