ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸೋಲಿನ ಆಘಾತ ಕಂಡಿದ್ದ ಟೀಂ ಇಂಡಿಯಾ, ಇದೀಗ 2ನೇ ಪಂದ್ಯದಲ್ಲಿ ಬಲಿಷ್ಠ ಕಮ್ಬ್ಯಾಕ್ ಮಾಡುವ ಮೂಲಕ ಗೆಲುವಿನ ಲಯ ಕಂಡುಕೊಳ್ಳಲು ಸಜ್ಜಾಗಿದೆ.
ಉಭಯ ತಂಡಗಳ ನಡುವಿನ ಐದು ಪಂದ್ಯಗಳ ಸರಣಿಯ ಎರಡನೇ ಪಂದ್ಯ ಆ.6ರಂದು ನಡೆಯಲಿದೆ. ಸರಣಿಯ ಮೊದಲ ಪಂದ್ಯದಲ್ಲಿ 4 ರನ್ಗಳ ವಿರೋಚಿತ ಸೋಲು ಕಂಡಿದ್ದ ಭಾರತ, 2ನೇ ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ. ಪ್ರಮುಖವಾಗಿ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಟೀಂ ಇಂಡಿಯಾಕ್ಕೆ ಎದುರಾಗಿದೆ.
ಮೊದಲ ಪಂದ್ಯದಲ್ಲಿ ಬೌಲರ್ಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಅತಿಥೇಯರನ್ನ 149 ರನ್ಗಳಿಗೆ ಕಟ್ಟಿಹಾಕಿದ್ದರು. ಆದರೆ 150 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ಭಾರತ, ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯದಿಂದಾಗಿ ಸೋಲಿನ ಆಘಾತ ಅನುಭವಿಸಿತು. ಇದರಿಂದಾಗಿ ಐದು ಪಂದ್ಯಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ 1-0 ಮುನ್ನಡೆ ಸಾಧಿಸಿದೆ. ಆದರೆ ಸರಣಿಯಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಬೇಕಾದರೆ ಟೀಂ ಇಂಡಿಯಾ ಆಟಗಾರರು ಮೊದಲ ಪಂದ್ಯದ ತಪ್ಪುಗಳನ್ನ ಸರಿಪಡಿಸಿಕೊಳ್ಳಬೇಕಿದೆ.
ಪ್ರಮುಖವಾಗಿ ಭಾರತದ ಬ್ಯಾಟರ್ಗಳ ಮೇಲೆ ಹೆಚ್ಚಿನ ಒತ್ತಡವಿದ್ದು, ಹಿರಿಯ ಆಟಗಾರರ ವಿಶ್ರಾಂತಿ ಹಿನ್ನೆಲೆಯಲ್ಲಿ ತಂಡದಲ್ಲಿ ಸ್ಥಾನ ಪಡೆದಿರುವ ಯುವ ಬ್ಯಾಟರ್ಗಳಾದ ಇಶಾನ್ ಕಿಶನ್, ಶುಭ್ಮನ್ ಗಿಲ್, ಸಂಜೂ ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಅವರುಗಳ ಮೇಲೆ ಒತ್ತಡ ಹೆಚ್ಚಿದೆ. ಇನ್ನೂ ಮೊದಲ ಪಂದ್ಯದಲ್ಲಿ ಉತ್ತಮ ಆಟವಾಡಿದ್ದ ತಿಲಕ್ ವರ್ಮ, 2ನೇ ಪಂದ್ಯದಲ್ಲೂ ಇದೇ ಫಾರ್ಮ್ ಮುಂದುವರಿಸಬೇಕಾದ ಅಗತ್ಯವಿದೆ.
ಈ ನಡುವೆ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಮೊದಲ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಇಶಾನ್ ಕಿಶನ್ ಅವರನ್ನ 2ನೇ ಪಂದ್ಯದಿಂದ ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ. ಇವರ ಸ್ಥಾನದಲ್ಲಿ ಮತ್ತೋರ್ವ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನ ಕಣಕ್ಕಿಳಿಸುವ ನಿರೀಕ್ಷೆ ಇದೆ. ಇಲ್ಲವಾದಲ್ಲಿ ಮೊದಲ ಟಿ20 ಪಂದ್ಯದಲ್ಲಿ ಆಡಿದ್ದ ತಂಡದೊಂದಿಗೆ ಮುಂದುವರೆಯುವ ಸಾಧ್ಯತೆ ಸಹ ಇದೆ. ಉಳಿದಂತೆ ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಬದಲಾವಣೆ ಮಾಡುವ ಯಾವುದೇ ಸಾಧ್ಯತೆ ಇಲ್ಲ.
ಇನ್ನೂ ಬೌಲರ್ಗಳ ಸಂಘಟಿತ ಪ್ರದರ್ಶನದ ಮೂಲಕ ಮೊದಲ ಟಿ20 ಪಂದ್ಯದಲ್ಲಿ 4 ರನ್ಗಳ ಗೆಲುವು ಸಾಧಿಸಿದ್ದ ವೆಸ್ಟ್ ಇಂಡೀಸ್, ಜಯದ ಹಾದಿಯಲ್ಲಿ ಮುನ್ನಡೆಯುವ ತವಕದಲ್ಲಿದೆ. ಪ್ರವಾಸಿ ಟೀಂ ಇಂಡಿಯಾ ಬೌಲರ್ಗಳ ಉತ್ತಮ ಪ್ರದರ್ಶನದ ನಡುವೆಯೂ ಪೈಪೋಟಿಯ ಮೊತ್ತ ಕಲೆಹಾಕಿದ್ದ ವಿಂಡೀಸ್, ಬ್ಯಾಟಿಂಗ್ ವಿಭಾಗದಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ, ಪ್ರವಾಸಿ ತಂಡಕ್ಕೆ ಮತ್ತಷ್ಟು ಪ್ರಬಲ ಪೈಪೋಟಿ ನೀಡಬಹುದು.








