ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಈ ಬಾರಿಯ ರಂಜಾನ್ ಅವಧಿಯಲ್ಲಿ ಅಲ್ಲಿನ ಮುಸ್ಲಿಂ ಸರ್ಕಾರಿ ನೌಕರರಿಗೆ ದಿನದ ಸೇವಾವಧಿಯಲ್ಲಿ 1 ಗಂಟೆಯ ವಿನಾಯ್ತಿ ನೀಡಲಾಗಿದೆ. ಈ ಮೂಲಕ ಅವರು ಕಚೇರಿಯಿಂದ ಬೇಗನೆ ಮನೆಗೆ ತೆರಳಿ ಉಪವಾಸ (ರೋಜಾ) ಅಂತ್ಯಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಈ ನಿರ್ಧಾರದ ಬೆನ್ನಲ್ಲೇ ಕರ್ನಾಟಕದಲ್ಲೂ ವಿನಾಯಿತಿ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ನಾಯಕರು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದಾರೆ.
ಮುಸ್ಲಿಂ ನೌಕರರು ಉಪವಾಸ ಅಂತ್ಯಗೊಳಿಸುವ ಸಮಯಕ್ಕೆ ಮನೆಗೆ ಹಿಂತಿರುಗಲು ಅನುಕೂಲವಾಗಬೇಕು ಎಂಬ ಕಾರಣದಿಂದ ಈ ವಿನಾಯಿತಿಯನ್ನು ನೀಡುವಂತೆ ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿದೆ. ಆದರೆ, ಈ ಬಗ್ಗೆ ಕರ್ನಾಟಕ ಸರ್ಕಾರದ ಅಧಿಕೃತ ಪ್ರತಿಕ್ರಿಯೆ ಇನ್ನೂ ಬಾರದ ಕಾರಣ ಅಂತಿಮ ನಿರ್ಧಾರ ಯಾವಾಗ ಹೊರಬೀಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.








