ಸತತ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿರುವ ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜೂ ಸ್ಯಾಮ್ಸನ್, ಇದೀಗ ಭಾರತ ತಂಡದಿಂದ ಸ್ಥಾನ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಎರಡು ಪಂದ್ಯಗಳಲ್ಲಿ ಸಂಜೂ ಸ್ಯಾಮ್ಸನ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಸಂಜೂ ಸ್ಯಾಮ್ಸನ್ ಅವರ ಈ ಪ್ರದರ್ಶನ ಟೀಂ ಇಂಡಿಯಾದಲ್ಲಿನ ಅವರ ಸ್ಥಾನಕ್ಕೆ ಆಪತ್ತು ತಂದೊಡ್ಡಿದೆ. ಅಲ್ಲದೇ ಈ ಹಿಂದೆ ಟೀಂ ಇಂಡಿಯಾಕ್ಕೆ ಆಯ್ಕೆ ಮಾಡದಿದ್ದಾಗ ಸ್ಯಾಮ್ಸನ್ ಬೆಂಬಲಕ್ಕೆ ನಿಂತಿದ್ದ ಫ್ಯಾನ್ಸ್ ಇದೀಗ ಅವರ ಕಳಪೆ ಫಾರ್ಮ್ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದಾರೆ.
ವಿಂಡೀಸ್ ವಿರುದ್ಧದ ಮೊದಲೆರಡು ಟಿ20 ಪಂದ್ಯಗಳಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡದೆ ತಮ್ಮ ಮೇಲಿನ ನಿರೀಕ್ಷೆಯನ್ನ ಹುಸಿಯಾಗಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿರುವ ಸಂಜೂ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಈವರೆಗೂ ಆಡಿರುವ 18 ಟಿ20 ಪಂದ್ಯದಲ್ಲಿ 19.56ರ ಸರಾಸರಿಯಲ್ಲಿ ಕೇವಲ 320 ರನ್‌ಗಳಿಸಿದ್ದು, 132.07ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಈ ಕಳಪೆ ಪ್ರದರ್ಶನದಿಂದಾಗಿ ಸಂಜೂ ಸ್ಯಾಮ್ಸನ್‌ಗೆ ಟೀಂ ಇಂಡಿಯಾದ ಬಾಗಿಲು ಮುಚ್ಚಿತೇ? ಎಂಬ ಅನುಮಾನ ಮೂಡುವಂತೆ ಮಾಡಿದೆ.
ಮುಂಬರುವ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ಪಂದ್ಯಾವಳಿಯ ಹೊಸ್ತಿಲಲ್ಲಿರುವ ಭಾರತ, ಇದಕ್ಕಾಗಿ ಆಟಗಾರರ ಪ್ರದರ್ಶನದ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ. ಇದಕ್ಕಾಗಿ ವಿಂಡೀಸ್ ಪ್ರವಾಸದಲ್ಲಿ ನಡೆದ ಏಕದಿನ ಮತ್ತು ಟಿ20 ಸರಣಿಯಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಿ ಪ್ರಯೋಗ ನಡೆಸಿದೆ. ಆದರೆ ಈ ಅವಕಾಶವನ್ನ ಸರಿಯಾಗಿ ಬಳಸಿಕೊಳ್ಳದ ಸಂಜೂ ಸ್ಯಾಮ್ಸನ್, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ.
ವಿಂಡೀಸ್ ಪ್ರವಾಸಕ್ಕೆ ಭಾರತ ತಂಡಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ಸಂಜೂ ಸ್ಯಾಮ್ಸನ್, ಅತ್ಯುತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಹೊಂದಲಾಗಿತ್ತು. ವಿಂಡೀಸ್ ವಿರುದ್ಧದ 2 ಏಕದಿನ ಮತ್ತು 2 ಟಿ20 ಪಂದ್ಯವನ್ನಾಡಿರುವ ಸ್ಯಾಮ್ಸನ್, ತಮಗೆ ದೊರೆತ ಅವಕಾಶವನ್ನ ಸದುಪಯೋಗ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಆದರೆ ವೆಸ್ಟ್ ಇಂಡೀಸ್ ವಿರುದ್ಧ ಇನ್ನೂ 3 ಟಿ20 ಪಂದ್ಯಗಳನ್ನ ಆಡುವ ಅವಕಾಶ ಸಂಜೂ ಸ್ಯಾಮ್ಸನ್‌ಗೆ ಲಭಿಸುವ ಸಾಧ್ಯತೆ ಇದ್ದು, ಈ ವೇಳೆ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಟೀಂ ಇಂಡಿಯಾದಲ್ಲಿ ಸಂಜೂ ಸ್ಯಾಮ್ಸನ್ ಸ್ಥಾನ ಭದ್ರವಾಗಲಿದೆ.