ವಿಂಬಲ್ಡನ್ 2021 – ಸೆರೆನಾ ವಿಲಿಯಮ್ಸ್ ದಾಖಲೆಯ ಕನಸಿಗೆ ಗಾಯದ ಬರೆ… ವೀನಸ್, ಆಶ್ಲೇ ಬಾರ್ಟಿ, ಕೆರ್ಬಾರ್ ಗೆ ಸುಲಭ ಗೆಲುವು
ದಾಖಲೆಯ ಪ್ರಶಸ್ತಿ ಗೆಲ್ಲುವ ಸೆರೆನಾ ವಿಲಿಯಮ್ಸ್ ಅವರ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ವಿಂಬಲ್ಡನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು 24ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಪಡೆಯುವ ಆಸೆಗೆ ಗಾಯ ನಿರಾಸೆಯನ್ನುಂಟು ಮಾಡಿದೆ.
ಮಹಿಳೆಯರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ಗಾಯಗೊಂಡು ಟೂರ್ನಿಯಿಂದ ಹೊರನಡೆದಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ಅವರು ಬಲರಾಸ್ ನ ಅಲಿಕಾಸಾಂಡ್ರಾ ವಿರುದ್ಧ ಆಡುವಾಗ ಗಾಯಗೊಂಡಿದ್ದರು. 39ರ ಹರೆಯದ ಸೆರೆನಾ ವಿಲಿಯಮ್ಸ್ ಗಾಯಗೊಳ್ಳುವ ಮುನ್ನ 3-1ರಿಂದ ಮುನ್ನಡೆಯಲ್ಲಿದ್ದರು. ಆನಂತರ 3-3ರಿಂದ ಸಮಗೊಂಡಿತ್ತು. ಅಂದ ಹಾಗೇ ಸೆರೆನಾ ವಿಲಿಯಮ್ಸ್ ಅವರು ಏಳು ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದರು.
ಇನ್ನೊಂದು ಸಿಂಗಲ್ಸ್ ನಲ್ಲಿ ಅಗ್ರ ಶ್ರೇಯಾಂಕಿತೆ ಆಸ್ಟ್ರೇಲಿಯಾದ ಆಶ್ಲೇಘ್ ಬಾರ್ಟಿ ಅವರು ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಬಾರ್ಟಿ ಅವರು 6-1, 6-7, 6-1ರಿಂದ ಸ್ಪೇನ್ ನ ಕಾರ್ಲಾ ಸೌರೇಝ್ ಅವರನ್ನು ಪರಾಭವಗೊಳಿಸಿದ್ರು.
ಇನ್ನು ಮಾಜಿ ನಂಬರ್ ವನ್ ಆಟಗಾರ್ತಿ ಜರ್ಮನಿಯ ಆಂಜಲಿಕೊ ಕೆರ್ಬಾರ್ ಅವರು ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಕೆರ್ಬಾರ್ ಅವರು ಮೊದಲ ಸುತ್ತಿನ ಪಂದ್ಯದಲ್ಲಿ 6-4, 6-3 ನೇರ ಸೆಟ್ ಗಳಿಂದ ಸರ್ಬಿಯಾದ ನೈನಾ ಸ್ಟೊಜಾನೊವಿಕ್ ಅವರನ್ನು ಸೋಲಿಸಿದ್ರು.
ಹಾಗೇ ವೀನಸ್ ವಿಲಿಯಮ್ಸ್ ಕೂಡ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ವೀನಸ್ ವಿಲಿಯಮ್ಸ್ ಅವರು ವಿಂಬಲ್ಡನ್ ಟೂರ್ನಿಯ ಅತೀ ಹಿರಿಯ ಆಟಗಾರ್ತಿ. ಐದು ಬಾರಿ ವಿಂಬಲ್ಡನ್ ಚಾಂಪಿಯನ್ ಕೂಡ ಆಗಿರುವ ವೀನಸ್ ವಿಲಿಯಮ್ಸ್ ಅವರು ಈ ಬಾರಿಯ ವಿಂಬಲ್ಡನ್ ಟೂರ್ನಿಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದುಕೊಂಡಿದ್ದರು.
ಮೊದಲ ಸುತ್ತಿನ ಪಂದ್ಯದಲ್ಲಿ ವೀನಸ್ ವಿಲಿಯಮ್ಸ್ ಅವರು 7-5, 4-6, 6-3ರಿಂದ ರೊಮಾನಿಯಾದ ಮಿಹೇಲ್ ಬುಝಾನೆಸ್ಕೊ ಅವರನ್ನು ಮಣಿಸಿದ್ರು.
ಮತ್ತೊಂದು ಸಿಂಗಲ್ಸ್ ನಲ್ಲಿ ಮಾಜಿ ನಂಬರ್ ವನ್ ಆಟಗಾರ್ತಿ ಚೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಅವರು 7-5, 6-4ರರಿಂದ ಸ್ಲೋವೇನಿಯಾದ ತಮಾರ ಜಿಡಾನ್‍ಸೆಕ್ ಅವರನ್ನು ಪರಾಭವಗೊಳಿಸಿ ಎರಡನೇ ಸುತ್ತು ಪ್ರವೇಶಿಸಿದ್ರು.