ಹೊಸದಿಲ್ಲಿ, ಮೇ 15 : ಕೊರೋನಾ ಸೋಂಕಿನ ಕಾರಣದಿಂದ ಜಾರಿಯಲ್ಲಿರುವ ಲಾಕ್ ಡೌನ್ ಅವಧಿ ಮುಗಿದ ನಂತರವೂ ಕೇಂದ್ರ ಸರ್ಕಾರಿ ನೌಕರರಿಗೆ ‘ವರ್ಕ್ ಫ್ರಂ ಹೋಮ್’ ಮುಂದುವರಿಸಲು ಸರಕಾರ ಚಿಂತನೆ ನಡೆಸುತ್ತಿದೆ. ಆಯ್ದ ಕೇಂದ್ರ ಸರ್ಕಾರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಕರಡು ಮಾರ್ಗಸೂಚಿಯೊಂದನ್ನು ಈ ಸಂಬಂಧ ಹೊರತಂದಿದೆ.
ಕೇಂದ್ರ ಸರಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಪ್ರಸ್ತುತ 48.34 ಲಕ್ಷ ಕೇಂದ್ರ ಸರ್ಕಾರಿ ನೌಕರರಿದ್ದು ಆಯ್ದ ಅರ್ಹ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ 15 ದಿನಗಳ ವರೆಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಬಹುದು ಎಂದು ಹೇಳಿದೆ. ಸಂಬಂಧ ಪಟ್ಟ ಎಲ್ಲಾ ಕೇಂದ್ರದ ಇಲಾಖೆಗಳಿಗೆ ಈ ಹಿನ್ನೆಲೆಯಲ್ಲಿ ಮಾಹಿತಿ ರವಾನಿಸಲಾಗಿದ್ದು, ಮೇ 21ರೊಳಗಾಗಿ ಇಲಾಖೆಗಳು ತಮ್ಮ ಅಭಿಪ್ರಾಯಗಳನ್ನು ಕಳುಹಿಸಬೇಕು ಎಂದು ಸೂಚಿಸಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಚಿವಾಲಯಗಳ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದು, ಸರಕಾರಿ ಮಾಹಿತಿಯ ಭದ್ರತೆ ಮತ್ತು ಗೌಪ್ಯತೆ ಕಾಯ್ದುಕೊಂಡು ತಡೆರಹಿತ ಕೆಲಸ ಕಾರ್ಯಗಳನ್ನು ನಿರ್ವಹಿಸುವಂತೆ ಮಾರ್ಗಸೂಚಿಗೆ ಅಂತಿಮ ರೂಪ ನೀಡಲಾಗಿದೆ. ಮನೆಯಿಂದ ಕೆಲಸ ನಿರ್ವಹಿಸಲು ಅಗತ್ಯವಿರುವ ಲ್ಯಾಪ್‌ಟಾಪ್ ಮತ್ತು ಇನ್ನಿತರ ಪರಿಕರಗಳನ್ನು ಸಚಿವಾಲಯದಿಂದಲೇ ನೀಡಲಾಗಿದೆ.








