ಕೊರೋನಾ ಸೋಂಕಿನ ಕಾರಣದಿಂದ ಎಲ್ಲೆಡೆಯೂ ಮನೆಯಿಂದಲೇ ಕೆಲಸ ಮಾಡುವಂತಾಗಿದೆ. ಕೊರೋನಾ ಸೋಂಕು ಭಾರತದಲ್ಲಿ ಹರಡಲು ಪ್ರಾರಂಭಿಸುತ್ತಿದ್ದಂತೆ, ಐಟಿ ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡಲು ಸೂಚಿಸಿದವು. ದೇಶದಲ್ಲಿ 43 ಲಕ್ಷ ಐಟಿ ಕಂಪೆನಿಗಳ ಉದ್ಯೋಗಿಗಳಲ್ಲಿ ಇಂದು ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಟೆಕ್ ಪಾರ್ಕ್ ಗಳನ್ನು ಅವಲಂಬಿಸಿದ್ದ 14.37 ಲಕ್ಷ ಕೋ. ರೂ. ಮೌಲ್ಯದ ಐಟಿ ವಲಯದ ಕಾರ್ಯ ವೈಖರಿ ಬದಲಾಗಿದೆ. ಜೊತೆಗೆ ವೆಚ್ಚದ ವಿಧಾನವೂ ಮೊದಲಿನಂತಿಲ್ಲ. ಹೀಗಾಗಿ ಐಟಿ ಕ್ಷೇತ್ರದ ನಾಯಕರು ಹೊಸ ಪರಿಸ್ಥಿತಿಗೆ ಅನುಗುಣವಾಗಿ ತೆರಿಗೆ ಮತ್ತು ಕಾರ್ಮಿಕರ ಕಾನೂನುಗಳಲ್ಲಿ ಬದಲಾವಣೆಗಳನ್ನು ಮಾಡುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಐಟಿ ನಾಯಕರು ತಿಂಗಳ ಪ್ರಾರಂಭದಲ್ಲಿ ಈ ಸಂಬಂಧ ಮಾತುಕತೆ ನಡೆಸಿದ್ದು, ಭವಿಷ್ಯದಲ್ಲಿ ಶೇಕಡಾ 50 ಐಟಿ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುವ ಪದ್ಧತಿಯನ್ನು ಅನುಸರಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತೆರಿಗೆ ಮತ್ತು ಕಾರ್ಮಿಕರ ಕಾನೂನಿನಲ್ಲಿ ಕೆಲವು ಮಾರ್ಪಾಡು ಮಾಡುವಂತೆ ಕೋರಿದ್ದು, ನಾಸ್ಕಾಂ ಈ ಬಗ್ಗೆ ವರದಿ ಸಿದ್ಧ ಪಡಿಸುತ್ತಿದೆ. ಕಾರ್ಮಿಕ ಮತ್ತು ದೂರ ಸಂಪರ್ಕ ಖಾತೆ ಸಚಿವರಿಗೆ ಈ ಬಗ್ಗೆ ವರದಿ ಕಳುಹಿಸಿ ಮುಂದಿನ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗಿರುವ ಕಾನೂನು, ವರ್ಕ್ ಫ್ರಮ್ ಹೋಮ್ ಗೆ ಪೂರಕವಾಗಿಲ್ಲದ ಹಿನ್ನೆಲೆಯಲ್ಲಿ ಕಾನೂನಿನಲ್ಲಿ ಮಾರ್ಪಾಡು ಮಾಡಿ, ಹೊಸ ದೃಷ್ಟಿಕೋನದಿಂದ ಇದನ್ನು ನೋಡುವ ಅಗತ್ಯವಿದೆ ಎಂದು ಇನ್ಫೋಸಿಸ್ ಸಿಒಒ ಯು.ಬಿ.ಪ್ರವೀಣ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಟಿಂಗ್ ಕೇಸ್ನಲ್ಲಿ ಹೆಚ್ಡಿಕೆ ಮನೆಯ ನಂಟು! ಕಮಿಷನರ್ ತನಿಖಾ ವರದಿ ಬೆನ್ನಲ್ಲೇ ಕುಮಾರಸ್ವಾಮಿ ವಿರುದ್ಧ ಮುಗಿಬಿದ್ದ ಸಿಎಂ ಪುತ್ರ ಯತೀಂದ್ರ
ಮೈಸೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಸಚಿವ...








