ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಸಿಂಧು ಕ್ವಾರ್ಟರ್ ಗೆ sindhu saakshatv
ಹುವೆಲ್ವಾ (ಸ್ಪೇನ್): ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಸೊಗಸಾದ ಪ್ರದರ್ಶನ ನೀಡುತ್ತಿರುವ ಎರಡು ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಪಿ.ವಿ ಸಿಂಧು ತಮ್ಮ ಗೆಲುವಿನ ಓಟವನ್ನು ಮುಂದುವರಿಸಿದ್ದಾರೆ.
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು 21-14, 21-18 ರಿಂದ ಥಾಯ್ಲೆಂಡ್ ನ ಪೋರ್ನ್ಪಾವೀ ಚೋಚುವಾಂಗ್ ವಿರುದ್ಧ 48 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿದರು. ಈ ಮೂಲಕ ಸಿಂಧು ಪೋರ್ನ್ಪಾವೀ ಚೋಚುವಾಂಗ್ ವಿರುದ್ಧ ತಮ್ಮ ಗೆಲುವಿನ ಸಂಖ್ಯೆಯನ್ನು ಐದಕ್ಕೆ ಏರಿಸಿಕೊಂಡಿದ್ದಾರೆ.
ಸಿಂಧು ಮೊದಲ ಗೇಮ್ ನಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಆದರೆ ಥಾಯ್ಲೆಂಡ್ ಆಟಗಾರ್ತಿ ಪುಟಿದೇಳುವ ಸೂಚನೆ ನೀಡಿದರು. 9-9 ಅಂಕಗಳಿಂದ ಪಂದ್ಯ ಸಮ ಸ್ಥಿತಿಯಲ್ಲಿ ಸಾಗುತ್ತಿದ್ದಾಗ ಸಿಂಧು ಸ್ಥಿರ ಪ್ರದರ್ಶನ ನೀಡಿ ಗೆಲುವು ದಾಖಲಿಸಿದರು.
ಎರಡನೇ ಗೇಮ್ ನ ಆರಂಭದಲ್ಲಿ ಜಿದ್ದಾಜಿದ್ದಿನ ಆಟ ಕಂಡು ಬಂದಿತು. ಗೇಮ್ ನ ಕೊನೆಯಲ್ಲಿ ಸಿಂಧು ಸತತ ಅಂಕಗಳನ್ನು ಕಲೆ ಹಾಕಿ ಥಾಯ್ಲೆಂಡ್ ಆಟಗಾರ್ತಿಯ ಸವಾಲು ಮೀರಿ ನಿಂತರು.
ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಜೋಡಿ 13-21, 15-21 ರಿಂದ ಥಾಯ್ಲೆಂಡ್ ಜೋಡಿ ವಿರುದ್ಧ ನಿರಾಸೆ ಅನುಭವಿಸಿತು. ಇನ್ನು ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯ್ ರಾಜ್ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ 20-22, 21-18, 15-21 ರಿಂದ ಮಲೇಷ್ಯಾ ಜೋಡಿಯ ವಿರುದ್ಧ ಆಘಾತ ಕಂಡಿತು.