ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ – ಸೋಲ್ಲಲ್ಲ.. ಗೆಲ್ಲಲ್ಲ.. ಮಳೆಯಲಿ.. ಜೊತೆಯಲಿ..!
ಐತಿಹಾಸಿಕ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯವನ್ನು ಕ್ರಿಕೆಟ್ ಜಗತ್ತು ಕಾತರದಿಂದ ಎದುರು ನೋಡುತ್ತಿತ್ತು. ಪಂದ್ಯಕ್ಕಿಂತ ಮುನ್ನ ಭಾರೀ ಪ್ರಚಾರವನ್ನು ಕೂಡ ಪಡೆದುಕೊಂಡಿತ್ತು. ಐಸಿಸಿ ಪಂದ್ಯವನ್ನು ಇಂಗ್ಲೆಂಡ್ ನಲ್ಲಿ ಆಯೋಜನೆ ಮಾಡಲು ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿತ್ತು.
ಕ್ರಿಕೆಟ್ ಪಂಡಿತರು ತಮ್ಮದೇ ಲೆಕ್ಕಚಾರವನ್ನು ಹಾಕಿಕೊಂಡಿದ್ದರು. ಫೈನಲ್ ನಲ್ಲಿ ಆಡುವ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ಆಟಗಾರರು ಸಾಕಷ್ಟು ಸಿದ್ಧತೆ ಕೂಡ ಮಾಡಿಕೊಂಡಿದ್ದರು. ಕ್ರಿಕೆಟ್ ಅಭಿಮಾನಿಗಳು ತುಂಬಾ ಕುತೂಹಲದಿಂದ ಕಾಯುತ್ತಿದ್ದರು.
ಆದ್ರೆ ಮಳೆರಾಯನ ಅಬ್ಬರಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನ ಫೈನಲ್ ಪಂದ್ಯ ಕೊಚ್ಚಿ ಹೋಗುತ್ತಿದೆ. ಫೈನಲ್ ಪಂದ್ಯದ ತಾಣವನ್ನು ಅಂತಿಮಗೊಳಿಸುವಾಗ ಐಸಿಸಿ ಸ್ವಲ್ಪ ಎಡವಟ್ಟು ಮಾಡಿಕೊಂಡಿದೆ. ಇಂಗ್ಲೆಂಡ್‍ನ ವಾತಾವರಣ ಗೊತ್ತಿದ್ರೂ ಕೂಡ ಐಸಿಸಿ ಈ ನಿರ್ಧಾರವನ್ನು ಯಾಕೆ ಕೈಗೊಂಡಿತ್ತು ಎಂಬ ಪ್ರಶ್ನೆ ಕೂಡ ಈಗ ಮೂಡುತ್ತಿದೆ.
ಫೈನಲ್ ಟೆಸ್ಟ್ ಪಂದ್ಯದ ಮೊದಲ ದಿನಕ್ಕೆ ಪೂರ್ತಿಯಾಗಿ ಮಳೆ ಅಡ್ಡಿಪಡಿಸಿತ್ತು. ಎರಡನೇ ದಿನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಮಂದ ಬೆಳಕಿನ ಕಾರಣ 64.4 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 146 ರನ್ ಗಳಿಸಿತ್ತು.
ಮೂರನೇ ದಿನ ಮತ್ತೆ ಮಳೆರಾಯನ ಆವಾಂತರ ಶುರುವಾಗಿತ್ತು. ಭೋಜನ ವಿರಾಮದ ಬಳಿಕ ಸ್ವಲ್ಪ ಹೊತ್ತು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ 92.1 ಓವರ್ ಗಳಲ್ಲಿ 217 ರನ್ ಗಳಿಗೆ ಆಲೌಟ್ ಆಯ್ತು.
ಮಳೆರಾಯನ ಅಡೆತಡೆಯ ನಡುವೆಯೂ ಇನಿಂಗ್ಸ್ ಆರಂಭಿಸಿದ್ದ ನ್ಯೂಜಿಲೆಂಡ್ ಮಂದ ಬೆಳಕಿನ ಕಾರಣ ಮೂರನೇ ದಿನದಾಟದ ಅಂತ್ಯಕ್ಕೆ 49 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 101 ರನ್ ಗಳಿಸಿತ್ತು.
ಇನ್ನು ನಾಲ್ಕನೇ ದಿನ…ಗುಡುಗು -ಸಿಡಿಲಿನ ಆರ್ಭಟದ ಜೊತೆಗೆ.. ಭಾರೀ ಮಳೆ. ಒಂದು ಎಸೆತವನ್ನು ಆಡಲು ಕೂಡ ಬಿಡಲಿಲ್ಲ. ಭಾರೀ ನಿರಾಸೆ ಕೂಡ ಅನುಭವಿಸಬೇಕಾಯ್ತು.
ಹೀಗಾಗಿ ಭಾರೀ ಕುತೂಹಲ ಮೂಡಿಸಿದ್ದ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯ ಬಹುತೇಕ ಡ್ರಾನಲ್ಲೇ ಅಂತ್ಯಗೊಳ್ಳುವುದು ಖಚಿತವಾಗಿದೆ. ಐದನೇ ದಿನದ ಆಟದ ಜೊತೆ ಹೆಚ್ಚುವರಿ ದಿನದ ಆಟ ನಡೆದ್ರೂ ಫಲಿತಾಂಶ ಹೊರಬರುವುದು ಅನುಮಾನವಾಗಿದೆ. ಒಂದು ವೇಳೆ ಉಭಯ ತಂಡಗಳಲ್ಲಿ ನಾಟಕೀಯ ಕುಸಿತ ಕಂಡ್ರೆ ಮಾತ್ರ ಫಲಿತಾಂಶವನ್ನು ಎದುರುನೋಡಬಹುದಾಗಿದೆ.
ಒಟ್ಟಿನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ಆಟಗಾರರು ಮಳೆಯಲಿ.. ಜೊತೆಯಲಿ ಎಂದು ಹಾಡು ಹಾಡುವ ಪ್ರಮೇಯ ಬಂದಿದೆ. ಎರಡು ದಿನವಿಡಿ ಆಟಗಾರರು ಪೆವಿಲಿಯನ್ ನಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಇನ್ನೆರಡು ದಿನ ಮಳೆಯಿಂದಾಗಿ ಮೈದಾನ ನೆನೆಯುತ್ತಿದೆ. ಆದ್ರೂ ಐದು ಮತ್ತು ಆರನೇ ದಿನದ ಆಟ ತುಂಬಾ ಕುತೂಹಲವನ್ನೂ ಮೂಡಿಸಿದೆ.
ಈ ನಡುವೆ ಕ್ರಿಕೆಟ್ ಅಭಿಮಾನಿಗಳು ಭಾರೀ ನಿರಾಸೆ ಅನುಭವಿಸಿದ್ದಾರೆ. ಮಳೆಯಿಂದಾಗಿ ಫೈನಲ್ ಪಂದ್ಯದಲ್ಲಿ ರನ್ ಗಳು ನೀರಿನಂತೆ ಹರಿದು ಬರಲಿಲ್ಲ. ಬೌಲರ್ ಗಳಿಗೆ ಮಿಂಚಿನಂತೆ ಬೌಲಿಂಗ್ ಎಸೆಯಲು ಸಾಧ್ಯವಾಗಲಿಲ್ಲ. ಬ್ಯಾಟ್ಸ್ ಮೆನ್ ಗಳಿಗೆ ಗುಡುಗಿನಂತೆ ರನ್ ದಾಖಲಿಸಲು ಸಾಧ್ಯವಾಗಿಲ್ಲ. ಒಟ್ಟಾರೆ ಇತಿಹಾಸ ಪುಟ ಸೇರಲಿರುವ ಫೈನಲ್ ಪಂದ್ಯದಲ್ಲಿ ಯಾರು ಗೆಲ್ಲುವುದೂ ಇಲ್ಲ. ಯಾರು ಸೋಲುವುದೂ ಇಲ್ಲ.. ಆದ್ರೆ ಜೊತೆ ಜೊತೆಯಲಿ ಹೋಗಿ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಪ್ರಶಸ್ತಿ ಸ್ವೀಕರಿಸುವುದನ್ನು ಮಾತ್ರ ಮಳೆರಾಯನಿಗೆ ತಪ್ಪಿಸಲು ಸಾಧ್ಯವೇ ಇಲ್ಲ..!