ಯಕ್ಷಗಾನದ ಸವ್ಯಸಾಚಿ ನಮ್ಮೆಲ್ಲರ ಪ್ರೀತಿಯ ತಾಳಮದ್ದಲೆಯ ಅರ್ಥದಾರಿ ಗತ್ತು ಗಾಂಭೀರ್ಯದ ಯಕ್ಷಲೋಕದ ಆಸ್ತಿ ವಾಸುದೇವ ಸಾಮಗರು ಇನ್ನಿಲ್ಲ: Vasudeva saamagar no more
ಬೆಳ್ಳಬೆಳಿಗ್ಗೆಯೇ ಅರಗಿಸಿಕೊಳ್ಳಲಾರದ ಆಘಾತದ ಸುದ್ದಿ ಬರಸಿಡಿಲಿನಂತೆ ಬಡಿತು.. ಅಂಬಿಕಾ ಕಾಲ್ ಮಾಡಿ ಸಾಮಗ್ರು ಹೋಗ್ ಬಿಟ್ರಂತೆ ಎಂದಾಗ ಕಣ್ಣ ಮುಂದೆ ಬಂದಿದ್ದು ಎರಡೇ ದೃಶ್ಯಗಳು ಒಂದು ಅವರ ಮಗುವಿನಂತ ನಗು, ಇನ್ನೊಂದು ಉತ್ತರಕುಮಾರನ ಅರ್ಥದಾರಕೆಯಲ್ಲಿ ಅವರು ಕೂತು ವ್ಯಾಖ್ಯಾನಿಸಿದ್ಧ ಬಂಗಿ.. ಕೆಲವೇ ದಿನಗಳ ಹಿಂದೆ ಕಾಸರಗೋಡಿನ ಎಡನೀರು ಮಠದ ಕೇಶವಾನಂದ ಭಾರತಿ ಶ್ರೀಗಳನ್ನು ಕಳೆದುಕೊಂಡೆವು. ಈಗ ಮಲ್ಪೆ ವಾಸುದೇವ ಸಾಮಗರು. ಇಬ್ಬರೂ ತಾರ್ಕಿಕವಾಗಿ ಸೈದ್ಧಾಂತಿಕವಾಗಿ ವಿರುದ್ಧ ಧ್ರುವದಲ್ಲಿದ್ದವರು. ಇಬ್ಬರೂ ದೈಹಿಕವಾಗಿ ಇಹ ತೊರೆದು ಪರದತ್ತ ನಡೆದುಬಿಟ್ಟರು. ಇದು ಯಕ್ಷಲೋಕಕ್ಕೆ ಮತ್ತೆ ತುಂಬಲಾರದ ಮಹಾನಷ್ಟ. Vasudeva saamagar no more
ಈ ದರಿದ್ರ ವರ್ಷ ಈ ಪರಮ ದರಿದ್ರ ಕರೋನಾ ಇನ್ನೆಷ್ಟು ಆತ್ಮೀಯ ಜೀವಗಳನ್ನು, ಅಭಿಮಾನಿಸುವ ವ್ಯಕ್ತಿಗಳನ್ನು ನುಂಗಿ ನೀರು ಕುಡಿಯಲುದೆಯೋ? ಈ 2020ರ ವರ್ಷ ನೆಗೆದುಬಿದ್ದು ಸಾಯಲಿ.
ನಿಮಗೆ ಎಲ್ಲಾದರೂ ಯೂ ಟ್ಯೂಬ್ ನಲ್ಲಿ “ಕಪಟ ನಾಟಕ ರಂಗ” ಯಕ್ಷ ಭಾಗವತಿಕೆಯ ಜುಗಲ್ ಬಂದಿ ಸಿಕ್ಕರೆ ಮರೆಯದೇ ನೋಡಿ. ಹಳೆಯ ತುಣಕದು; ಧರ್ಮಸ್ಥಳ ಮೇಳದ ಧ್ರುವತಾರೆ ಪುತ್ತಿಗೆ ರಘುರಾಮ ಹೊಳ್ಳರು ಮತ್ತು ಸವ್ಯಸಾಚಿ ವಾಸುದೇವ ಸಾಮಗರ ಮನ ತಣಿಯುವ ಜುಗಲ್ ಬಂದಿ. ಯಾರಿಗೆ ಯಾರು ಸಾಟಿ? ಜೊತೆಗೆ ಸಾಧ್ಯವಾದರೇ, ಉತ್ತರ ಕುಮಾರ ಮತ್ತು ಅರ್ಜುನನ ಅರ್ಥಧಾರಿಕೆಯ ಪ್ರಸಂಗ ನೋಡಿ. ವಾಸುದೇವ ಸಾಮಗರ ಅಸಲು ಸಾಮರ್ಥ್ಯವೇನು ಅನ್ನುವ ಸಣ್ಣ ಝಲಕ್ ಅದರಲ್ಲಿದೆ. ಉತ್ತರ ಭೂಪನಾಗಿ ವಾಸುದೇವ ಸಾಮಗರ ಅಬ್ಬರ, ಹುಸಿ ಪರಾಕ್ರಮದ ಮಾತುಗಳು, ನಗು ಉಕ್ಕಿಸುವ ಪಂಚಿಂಗ್ ಡೈಲಾಗ್ ಗಳು ಮರೆಯಲು ಸಾಧ್ಯವೇ?
ಎಷ್ಟಾದರೂ ಅದು ಯಕ್ಷಗಾನವನ್ನು ರಕ್ತದಲ್ಲೇ ಬಸಿದುಕೊಂಡು ಬಂದ ವಂಶ. ಮಲ್ಪೆ ಹರಿದಾಸ ಸಾಮಗರನ್ನು ದೊಡ್ಡ ಸಾಮಗರೆಂದೇ ಈಗಲೂ ಯಕ್ಷರಂಗ ಗುರುತಿಸುತ್ತದೆ. ಚಿಕ್ಕ ಸಾಮಗರು ವಾಸುದೇವರು; ಆ ವಂಶದ ಮೂರನೇ ಜನರೇಶನ್ ಅಪ್ಪಟ ಪ್ರತಿಭಾವಂತ ನಮ್ಮ ಪ್ರದೀಪಣ್ಣ; ಪ್ರದೀಪ್ ಸಾಮಗ.. ವಾಸುದೇವ ಸಾಮಗರಿಗೆ ಒಂದು ಕಾಲದಲ್ಲಿ ಅತ್ಯಂತ ಪ್ರಖ್ಯಾತಿ ತಂದು ಕೊಟ್ಟ ಪಾತ್ರ ಯಕ್ಷಲೋಕ ವಿಜಯ ಪ್ರಸಂಗದ ಪ್ರದೀಪನ ಪಾತ್ರ. ಪ್ರಾಯಶಃ ಹಾಗಾಗೇ ತಮ್ಮ ಪುತ್ರನಿಗೂ ಪ್ರದೀಪ ಅಂತ ಹೆಸರಿಟ್ಟರೇನೋ!
ವಾಸುದೇವ ಸಾಮಗರು ಇವತ್ತು ನಿನ್ನೆಯವರಲ್ಲ, ಯಕ್ಷಲೋಕದ ಶಂಕರ್ ನಾಗ್ ಕಾಳಿಂಗ ನಾವುಡರ ಕಾಲದವರು. ಕಾಳಿಂಗ ನಾವುಡರು ಬದುಕಿದ್ದಾಗಲೇ ಸಾಲಿಗ್ರಾಮ ಮೇಳದಲ್ಲಿದ್ದವರು. ಧರ್ಮಸ್ಥಳ, ಕದ್ರಿ, ಕರ್ನಾಟಕ ಸುರತ್ಕಲ್, ಪೆರ್ಡೂರು ಮೇಳದಲ್ಲಿ ಯಕ್ಷ ಸೇವೆ ಸಲ್ಲಿಸಿದವರು. ಚೈತ್ರಪಲ್ಲವಿ, ನಾಗಶ್ರೀ, ಭಾನುತೇಜಸ್ವಿ ಪ್ರಸಂಗಗಳು ಪೂರ್ಣವಾಗಿದ್ದೇ ಸಾಮಗರ ಉಪಸ್ಥಿತಿಯಿಂದಾಗಿ. ರುಕ್ಮಾಂಗದ ಮೋಹಿನಿ, ಅಂಬೆ ಪರಶುರಾಮ, ಕಂಸ ಕೃಷ್ಣ, ಭೀಷ್ಮ, ದಶರಥ ಕೈಕೆ, ಶನೈಶ್ವರ ಮಹಾತ್ಮೆಯ ವಿಕ್ರಮಾದಿತ್ಯ, ಶಕುನಿ ಹೀಗೆ ಸಾಮಗರು ನಿರ್ವಹಿಸಿದ ಪಾತ್ರಗಳು ಸದಾ ಯಕ್ಷ ಪ್ರೇಮಿಗಳ ಮನಸಿನಲ್ಲಿ ಚಿರಸ್ಥಾಯಿ. ಮಲ್ಪೆ ಹರಿದಾಸ ಸಾಮಗರ ಸ್ಮರಣೆಯ ಯಕ್ಷಮಾಲಿಕೆಯಲ್ಲಿ ಮೈರಾವಣ ಕಾಳಗ, ಶಾಪಗ್ರಸ್ತ ಕರ್ಣ, ಇತ್ಯಾದಿ ಪ್ರಸಂಗಗಳ ಮೂಲಕ ವಾಸುದೇವ ಸಾಮಗರು ಸದಾ ಬದುಕಿರುತ್ತಾರೆ.
ನಾನೊಂದು ವಾಹಿನಿಯಲ್ಲಿ (ಸುದ್ದಿ ಟಿವಿ) ಕೆಲಸ ಮಾಡುವಾಗ ಯಕ್ಷಗಾನದ ಕುರಿತಾದ ಒಂದು ವಿಶೇಷ ಕಾರ್ಯಕ್ರಮ ನಡೆಸುತ್ತಿದ್ದೆವು. ಆಗಿನ ನಮ್ಮ ಸಂಪಾದಕರಿಗೆ ಯಕ್ಷಗಾನದ ಕುರಿತಾದ ವಿಶೇಷ ಅಭಿಮಾನವಿತ್ತು. ಆಗ ಅತಿಥಿಯಾಗಿ ಅವರನ್ನು ಒಂದು ಸಂಚಿಕೆಗೆ ಕರೆಸಿದ್ದೆವು. ಸಾಮಗರು ಅಂದು ಯಕ್ಷಪ್ರಪಂಚದ ಒಳಹೊರಗಿನ ಬಗ್ಗೆ ಮಾತಾಡಿದ್ದ ಅರ್ಥಪೂರ್ಣ ಮಾತುಗಳನ್ನು ನೀವು ಕೇಳಿಸಿಕೊಳ್ಳಲೇಬೇಕು. ಯೂ ಟ್ಯೂಬ್ ನಲ್ಲಿ ಲಭ್ಯವಿದೆ ಗಮನಿಸಿ.
ತೆಂಕು ಬಡಗು ತಿಟ್ಟಿನ ನಡುವೆ ಸೇತುವೆ ಬೆಸೆದ, ಯಕ್ಷ ಸಂಘಟಕ, ಭಾಗವತ, ಅರ್ಥದಾರಿ, ಪಾತ್ರದಾರಿ, ತಾಳಮದ್ದಲೆಯ ವ್ಯಾಖ್ಯಾನಕಾರ, ತಮ್ಮದೇ ಸಂಯಮಂ ಸಂಸ್ಥೆಯನ್ನು ಕಟ್ಟಿಕೊಂಡು ಯಕ್ಷಗಾನ ಕಲೆಯ ಅಸ್ಥಿತ್ವವನ್ನು ಉಳಿಸಲು ನಿರಂತರವಾಗಿ ಶ್ರಮಿಸುತ್ತಿದ್ದ ಮಲ್ಪೆ ವಾಸುದೇವ ಸಾಮಗರು ಇನ್ನು ಕೇವಲ ನೆನಪು ಮಾತ್ರ. ಅವರ ಪುತ್ರ ಡಾ ಪ್ರದೀಪ್ ಸಾಮಗರು ನನ್ನ ಆತ್ಮೀಯ ಮಿತ್ರರು. ಈ ತೀರಲಾರದ ದುಃಖ ನೋವುಗಳನ್ನು ಬರಿಸುವ ಶಕ್ತಿ ಪ್ರದೀಪಣ್ಣನಿಗೆ ಸಿಗಲಿ. ಜಗನ್ಮಾತೆ ವಾಸುದೇವ ಸಾಮಗರ ಯಕ್ಷ ಚೈತನ್ಯಕ್ಕೆ ಚಿರಶಾಂತಿ ಕರುಣಿಸಲಿ ಎನ್ನುವ ಪ್ರಾರ್ಥನೆಯಷ್ಟೆ.
-ವಿಭಾ (ವಿಶ್ವಾಸ್ ಭಾರದ್ವಾಜ್)
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ತನ್ನ ಏಳನೇ ವಯಸ್ಸಿನಲ್ಲಿ ಪುಸ್ತಕ ಪ್ರಕಟಿಸಿದ ವಿಶ್ವದ ಅತ್ಯಂತ ಕಿರಿಯ ಲೇಖಕಿhttps://t.co/jJE7OcLMVx
— Saaksha TV (@SaakshaTv) November 7, 2020
ಎಂಥಾ ಸಾವ್ ಮಾರಾಯ…! ಏನ್ ಗುರು.. ಹಿಂಗಾಡ್ತಾರೋ..! ಬಿಡೋ.. ಈ ಬಾರಿಯೂ ಕಪ್ ನಮ್ದಲ್ಲ…! https://t.co/eDJCk0amj2
— Saaksha TV (@SaakshaTv) November 7, 2020
ಪ್ರೋಟೀನ್ ನಿಂದ ಸಮೃದ್ಧವಾಗಿರುವ 8 ರುಚಿಯಾದ ಹಣ್ಣುಗಳುhttps://t.co/19w0puYwTB
— Saaksha TV (@SaakshaTv) November 6, 2020