ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಖಡಕ್ ಸೂಚನೆಯನ್ನೂ ಲೆಕ್ಕಿಸದೆ ನಾಯಕರು ಹೇಳಿಕೆಗಳನ್ನು ನೀಡುತ್ತಿರುವುದು ಇದೀಗ ಬಣ ರಾಜಕೀಯದ ಕಿಚ್ಚನ್ನು ಮತ್ತಷ್ಟು ಹೊತ್ತಿಸಿದೆ. ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ವಾರ್ನಿಂಗ್ ನೀಡಿದ್ದರೂ, ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರುತ್ತಾರೆ ಎಂದು ಡಾ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಶಾಸಕ ಗಾಣಿಗ ರವಿ ತೀಕ್ಷ್ಣವಾಗಿ ವ್ಯಂಗ್ಯವಾಡಿದ್ದಾರೆ.
ಯತೀಂದ್ರ ಅವರೇ ನಮಗೆ ಹೈಕಮಾಂಡ್
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಗಾಣಿಗ ರವಿ, ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಬಹಿರಂಗ ಹೇಳಿಕೆ ನೀಡದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬರೋಬ್ಬರಿ ನಾಲ್ಕು ಬಾರಿ ಸೂಚನೆ ನೀಡಿದ್ದಾರೆ. ಆದರೂ ಯತೀಂದ್ರ ಅವರು ಹೇಳಿಕೆ ನೀಡುತ್ತಿದ್ದಾರೆ ಎಂದರೆ, ಅವರಿಗಿಂತ ದೊಡ್ಡವರು ಯಾರಿದ್ದಾರೆ? ಖರ್ಗೆಗಿಂತಲೂ ಯತೀಂದ್ರ ಪವರ್‌ಫುಲ್, ಹೀಗಾಗಿ ಅವರೇ ನಮ್ಮ ಹೈಕಮಾಂಡ್ ಎಂದು ಗಾಣಿಗ ರವಿ ವ್ಯಂಗ್ಯದ ಬಾಣ ಬಿಟ್ಟರು.
ನಮಗೆ ಹೈಕಮಾಂಡ್ ನೋಟಿಸ್ ಕೊಡಬಹುದು, ಆದರೆ ನಾವು ಹೈಕಮಾಂಡ್‌ಗೆ (ಯತೀಂದ್ರ ಅವರಿಗೆ) ನೋಟಿಸ್ ಕೊಡಲು ಸಾಧ್ಯವಿಲ್ಲ. ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಯತೀಂದ್ರ ನಮ್ಮ ಹೈಕಮಾಂಡ್ ಎಂದ ಮೇಲೆ ನಾವೂ ಅದನ್ನೇ ಒಪ್ಪಿಕೊಳ್ಳುತ್ತೇವೆ ಎಂದು ಹೇಳುವ ಮೂಲಕ, ಪಕ್ಷದ ಶಿಸ್ತನ್ನು ಯಾರು ಉಲ್ಲಂಘಿಸುತ್ತಿದ್ದಾರೆ ಎಂಬುದನ್ನು ಮಾರ್ಮಿಕವಾಗಿ ಎತ್ತಿ ತೋರಿಸಿದರು.
ಚಾಣಾಕ್ಷ ಡಿಕೆಶಿ ಆಟ ಈಗಷ್ಟೇ ಶುರುವಾಗಿದೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಗಾಣಿಗ ರವಿ, ಡಿಕೆಶಿ ಅವರ ರಾಜಕೀಯ ತಂತ್ರಗಾರಿಕೆಯನ್ನು ಕೊಂಡಾಡಿದರು. ರಾಜಕಾರಣದಲ್ಲಿ ಆಟ ಇರಲೇಬೇಕು, ನಮ್ಮದು ದುರ್ಬಲವಾದ ಐರ್ಲೆಂಡ್ ಟೀಂ ಅಲ್ಲ, ಬಲಿಷ್ಠವಾದ ಟೀಂ ಇಂಡಿಯಾ ಇದ್ದಂತೆ. ಡಿ.ಕೆ. ಶಿವಕುಮಾರ್ ಅವರಿಗೆ ರಾಜಕೀಯದಲ್ಲಿ ಅಪಾರ ಚಾಣಾಕ್ಷತನವಿದೆ. ಯಾವಾಗ ಯಾವ ಕಾಯಿನ್ ಮೂವ್ ಮಾಡಬೇಕು, ಯಾವ ದಾಳ ಉರುಳಿಸಿದರೆ ಆಟ ಗೆಲ್ಲಬಹುದು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಸದ್ಯ ಅವರು ಸೈಲೆಂಟ್ ಆಗಿ ಕಾಯಿನ್ ಮೂವ್ ಮಾಡುತ್ತಿದ್ದಾರೆ, ಸದ್ಯದಲ್ಲೇ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ ಎಂದು ಭವಿಷ್ಯ ನುಡಿದರು.
ಹೈಕಮಾಂಡ್ ಮಾತಿಗೂ ಬ್ಲ್ಯಾಕ್ ಅಂಡ್ ವೈಟ್
ಇತ್ತೀಚೆಗಷ್ಟೇ ನಾವೆಲ್ಲರೂ ಒಗ್ಗಟ್ಟಾಗಿ ಹೋಗಬೇಕು ಎಂದು ಖರ್ಗೆ ಅವರು ಪಾಠ ಮಾಡಿದ್ದರು. ಆದರೆ ರಾಜ್ಯ ನಾಯಕರು ಹೈಕಮಾಂಡ್ ಆದೇಶವನ್ನೇ ಧಿಕ್ಕರಿಸಿ ಮಾತನಾಡುತ್ತಿರುವುದು ಕಾಂಗ್ರೆಸ್ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಯತೀಂದ್ರ ಹೇಳಿಕೆಗೆ ಗಾಣಿಗ ರವಿ ತಿರುಗೇಟು ನೀಡಿರುವುದು ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಗಳ ನಡುವಿನ ಶೀತಲ ಸಮರ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ.








