ಪುತ್ತೂರಿನಲ್ಲಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ ಖಂಡಿಸಿ ಅರುಣ್ ಪುತ್ತಿಲ್ ಅವರು ಈಗಾಗಲೇ ಹೋರಾಟ ಹಮ್ಮಿಕೊಂಡಿದ್ದಾರೆ.
ಪೊಲೀಸರಿಂದ ಹಲ್ಲೆಗೆ ಒಳಗಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಹಿಂದೂ ಯುವಕರನ್ನು ಭೇಟಿಯಾಗಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ತೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಯತ್ನಾಳ್ ಅವರನ್ನು ಆಸ್ಪತ್ರೆ ಬಳಿ ಪುತ್ತಿಲ್ ಅವರು ಸ್ವಾಗತಿಸಿದ್ದಾರೆ. ನಂತರ ಯತ್ನಾಳ್ ಆರೋಗ್ಯ ವಿಚಾರಿಸಿದರು.
ಅರುಣ್ ಪುತ್ತಿಲ್ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿಯು ಅವರಿಗೆ ಟಿಕೆಟ್ ನೀಡಿರಲಿಲ್ಲ. ಹೀಗಾಗಿ ಪಕ್ಷದ ವಿರುದ್ಧ ಬೇಸರಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಪುತ್ತಿಲ ಅವರ ಸ್ಪರ್ಧೆಯಿಂದಾಗಿ ಕ್ಷೇತ್ರದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿಯುವಂತಾಯಿತು. ಚುನಾವಣೆ ನಡೆದ ನಂತರ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.








