ಬೆಂಗಳೂರು : ಕೊರೊನಾ ಸೃಷ್ಟಿಸಿರುವ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಂದ ಹೊರಬರಲು ಯೋಗ, ಪ್ರಾಣಾಯಾಮ, ಹಾಗೂ ಧ್ಯಾನ ಪ್ರಮುಖ ಸಾಧನಗಳಾಗಿವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೇಣುಗೋಪಾಲ್ ಕೆ. ಆರ್. ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಬೆಂಗಳೂರು ವಿಶ್ವವಿದ್ಯಾಲಯದ ಯೋಗ ಕೇಂದ್ರ ಆಯೋಜಿಸಿದ್ದ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ನಿಯಮಿತವಾದ ಯೋಗಾಭ್ಯಾಸದಿಂದ ಆತ್ಮ ವಿಶ್ವಾಸ , ಧೈರ್ಯ, ತಾಳ್ಮೆ ಹಾಗೂ ದೃಢತೆ ಮೈಗೂಡತ್ತದೆ. ನಾವೆಲ್ಲರೂ ಆರೋಗ್ಯಕರ ಮತ್ತು ನೆಮ್ಮದಿಯ ಜೀವನ ನಡೆಸಲು ನಮ್ಮ ಹಿರಿಯರು ಸಾಕಷ್ಟು ಸೂತ್ರಗಳನ್ನು ತಿಳಿಸಿಕೊಟ್ಟಿದ್ದಾರೆ. ಅವುಗಳಲ್ಲಿ ಯೋಗವು ಒಂದು. ಯೋಗ ಸಾಧನೆಯ ಮೂಲಕ ನಾವು ನಮ್ಮ ಮನಸ್ಸು,ದೇಹ ಮತ್ತು ಆರೋಗ್ಯವನ್ನು ನಿಯಂತ್ರಣ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತಂಜಲಿ ಯೋಗ ಟ್ರಸ್ಟ್ ನ ಶ್ರೀ.ಶ್ರೀ. ಪ್ರಕಾಶ್ ಯೋಗಿ ಗುರೂಜಿ ಅವರು ಮಾತನಾಡಿ, ಸಾಕಷ್ಟು ದಾಳಿಗಳ ನಡುವೆಯೂ ಭಾರತೀಯರು ಪ್ರಬಲವಾಗಿ ಉಳಿದಿರಲು ಕಾರಣವೇ ಯೋಗ ಮತ್ತು ಅಧ್ಯಾತ್ಮ. ಯೋಗ ನಮಗೆ, ಅಂತರ್ಮುಖಿಯಾಗಿ ಸಂಚರಿಸಲು ಸಹಾಯ ಮಾಡುತ್ತದೆ. ಈ ಮೂಲಕ ನಾವು ಅನಂತ ಶಕ್ತಿಯನ್ನು ಪಡೆದುಕೊಳ್ಳ ಬಹುದು. ಆದರೆ, ಮನುಷ್ಯ ಆಸೆ ಮತ್ತು ಮೊಹದ ದಾಸನಾಗಿ ಬಹುರ್ಮುಖಿಯಾಗಿ ಸಂಚರಿಸುತ್ತಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಯೋಗ ಕೆಂದ್ರದ ಮುಖ್ಯಸ್ಥರಾದ ಪ್ರೊ. ಕೆ. ರಾಮಕೃಷ್ಣಯ್ಯ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂಧಿಗಳು, ಯೋಗ ಕೆಂದ್ರದ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಭಾಗವಾಗಿ ಪ್ರಕಾಶ್ ಗುರೂಜಿ ಅವರು ಒಂದೂವರೆ ಗಂಟೆಗಳ ಕಾಲ ಆನ್ಲೈನ್ ಮೂಲಕವೇ ಎಲ್ಲರಿಗೂ ಯೋಗ ತರಬೇತಿ ನೀಡಿದರು.








